ಕಾಫಿ ನಾಡಿನಲ್ಲಿ ಮತ್ತೆ ಮೂರು ದಿನ ರೆಡ್‌ ಅಲರ್ಟ್‌

24 ckm 5
ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮದಲ್ಲಿ ಸುಶೀಲ ಎಂಬುವರ ಮನೆ ಮೇಲೆ ಬಿದ್ದಿರುವ ಮರ
Published on
ಚಿಕ್ಕಮಗಳೂರು: ಕಾಫಿಯ ನಾಡಿನಲ್ಲಿ ಪೂರ್ವ ಮುಂಗಾರಿನ ಅರ್ಭಟ ದಿನೇ ದಿನೇ ಹೆಚ್ಚಾಗುತ್ತಿದೆ. ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ರಾಜ್ಯ ಹವಮಾನ ಇಲಾಖೆ ಮುಂದಿನ ಮೂರು ದಿನಗಳವರೆಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಹಾಗಾಗಿ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮಳೆಯಿಂದಾಗಿ ಕಾಫಿಯ ನಾಡು ತತ್ತರಿಸುತ್ತಿದೆ. ಅದರಲ್ಲೂ ಮಲೆನಾಡಿನಲ್ಲಿ ಬಿಡುವಿಲ್ಲದೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅದೇ ಪ್ರಮಾಣದಲ್ಲಿ ಬಲವಾಗಿ ಗಾಳಿ ಬೀಸುತ್ತಿರುವ ಪರಿಣಾಮ ಹಲವೆಡೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳುತ್ತಿವೆ. ಅದ್ದರಿಂದ ಹಲವು ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಕೆಲವು ಕುಗ್ರಾಮಗಳಿಗೆ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್‌ ಇಲ್ಲದೆ ಕತ್ತಲೆಯಲ್ಲಿ ಇಲ್ಲಿನ ಜನರು ಕಾಲ ಕಳೆಯುತ್ತಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ದಟ್ಟವಾದ ಮೋಡ, ಥಂಡಿ ಗಾಳಿ, ನಿರಂತರವಾಗಿ ಬೀಳುತ್ತಿರುವ ಮಳೆಯ ಚಿತ್ರಣ ಮುಂಗಾರು ಮಳೆಯನ್ನು ಮೀರಿಸುವಂತ್ತಿದೆ. ಜುಲೈ ತಿಂಗಳಲ್ಲಿ ನೀರು ಕಾಣುತ್ತಿದ್ದ ತುಂಗಾ, ಭದ್ರಾ, ಹೇಮಾವತಿ ಹಾಗೂ ಇತರೆ ಉಪ ನದಿಗಳಲ್ಲಿ ಈಗಲೇ ನೀರು ಕಾಣುವಂತ್ತಿದೆ. ಮಲೆನಾಡಿನ  ಹಳ್ಳಗಳಲ್ಲೂ ಕೂಡ ನೀರು ಹರಿಯುತ್ತಿದೆ. ನಿರಂತರ ಮಳೆಯಿಂದಾಗಿ ಮಣ್ಣಿನ ತೇವಾಂಶ ಹೆಚ್ಚಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಭೂ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಹಾಗೂ ಇತರೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಆರಂಭವಾದ ತುಂತುರು ಮಳೆ ಸಂಜೆಯ ನಂತರವೂ ಮುಂದುವರೆದಿತ್ತು. ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಹಾಗೂ ಬಿರುಗಾಳಿ ವ್ಯಾಪಕವಾಗಿ ನಡೆಯುತ್ತಿದ್ದು, ಹಲವೆಡೆ  ಭಾರಿ ಆಸ್ತಿ ಹಾನಿ ಸಂಭವಿಸಿದೆ. ಬಣಕಲ್ ಸಮೀಪದ ಚಕ್ಕಮಕ್ಕಿ ಗ್ರಾಮದಲ್ಲಿ ಮಹಮ್ಮದ್ ಎಂಬುವವರ ಕುರಿಶೆಡ್ ಮಳೆಯ ಕಾರಣದಿಂದ ಕುಸಿದಿದ್ದು, ಒಳಗಿದ್ದ ಒಂದು ಕುರಿ ಸಾವನ್ನಪ್ಪಿದೆ ಹಾಗೂ ಹಲವಾರು ಕುರಿಗಳು ಗಾಯಗೊಂಡಿವೆ. ಈ ಘಟನೆದಿಂದ ಸಾಕಷ್ಟು ನಷ್ಟ ಉಂಟಾಗಿದೆ. ಜಾರಗಲ್ ಗ್ರಾಮದ ಜಯಂತಿಯವರ ಮನೆಯ ಕಾಂಪೌಂಡ್ ಗೋಡೆ ಕುಸಿತಗೊಂಡಿದೆ. ತ್ರಿಪುರ ಗ್ರಾಮದ ಸುಶೀಲಾ ಎಂಬುವರ ಮನೆಯ ಮೇಲೆ ಮರ ಬಿದ್ದು, ಮನೆಗೆ ಹಾಗೂ ಮನೆಯ ಮುಂದಿನ ಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ಹೆಚ್ಚಿನ ಹಾನಿಯಾಗಿದೆ. ಗಂಭೀರತೆ ಹೆಚ್ಚಿದ್ದರೂ, ಯಾವುದೇ ಮಾನವ ಹಾನಿ ಸಂಭವಿಸಿಲ್ಲ. ತಾಲೂಕಿನಾದ್ಯಂತ ಬಿರುಗಾಳಿಯಿಂದಾಗಿ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಹಲವಾರು ಗ್ರಾಮಗಳು ವಿದ್ಯುತ್ ಸಂಪರ್ಕದಿಂದ ತತ್ತರಿಸುತ್ತಿವೆ. ರಾತ್ರಿ ವೇಳೆ ಕತ್ತಲೆಯ ಮಡುವಿನಲ್ಲಿ ಗ್ರಾಮೀಣ ಜನತೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚುವರಿ ಶೇ. 87 ರಷ್ಟು ಮಳೆ

ಜಿಲ್ಲೆಯಲ್ಲಿ ಕಳೆದ ಜನವರಿ 1 ರಿಂದ ಮೇ 24 ರವರೆಗೆ ಸರಾಸರಿ ವಾಡಿಕೆ ಮಳೆ 139.8 ಮಿ.ಮೀ. ಆದರೆ, ಪ್ರಸಕ್ತ ಸಾಲಿನಲ್ಲಿ ಈವರೆಗೆ ಬಂದಿರುವ ಮಳೆ 260.9 ಮಿ.ಮೀ. ಅಂದರೆ, ಹೆಚ್ಚವರಿಯಾಗಿ ಶೇ. 87 ರಷ್ಟು ಮಳೆಯಾಗಿದೆ. ಬಹುತೇಕ ಎಲ್ಲಾ ತಾಲೂಕುಗಳಲ್ಲೂ ವಾಡಿಕೆಗೂ ಮೀರಿ ಮಳೆಯಾಗಿದೆ.

ಕಳೆದ 24 ಗಂಟೆಗಳಲ್ಲಿನ ವಾಡಿಕೆ ಮಳೆ ಸರಾಸರಿ 3.1 ಮೀ.ಮೀ. ಆದರೆ, ಬಿದ್ದ ಮಳೆ 27.2 ಮಿ.ಮೀ. ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಅದ್ದರಿಂದ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಲು ಪ್ರಕಟಣೆ ಹೊರಡಿಸಿದೆ. ಅಂದರೆ, ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ತೆರಳಬಾರದು, ಜಾನುವಾರ ಶುಚಿಗೊಳಿಸಲು ಬಟ್ಟೆಗಳನ್ನು ತೊಳೆಯಲು ಹಳ್ಳ, ಕೆರೆ ಕಟ್ಟೆಗಳಿಗೆ ತೆರಳಬಾರದು, ಧರೆ ಗುಡ್ಡ ಕುಸಿತ ಉಂಟಾಗುವ ಸಂಭವ ಇರುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net