ಕಾಫಿ ತೋಟ ಉಳಿಸಿಕೊಳ್ಳುವ ಸವಾಲು

MDG elep
ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮದ ದಿವಾಕರ ಎಂಬುವವರ ತೋಟದಲ್ಲಿ ಕಾಫಿ ಮತ್ತು ಬಾಳೆ ಗಿಡಗಳನ್ನು ಕಾಡಾನೆಗಳು ಧ್ವಂಸಗೊಳಿಸಿರುವುದು.
Published on

ಮೂಡಿಗೆರೆ: ನಿರಂತರವಾಗಿ ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿರುವ 2 ಕಾಡಾನೆಗಳು, ಕಾಫಿ, ಅಡಕೆ, ಬಾಳೆ ಮತ್ತಿತರ ಗಿಡಗಳನ್ನು ಧ್ವಂಸಗೊಳಿಸಿದ್ದು, 4 ತೋಟದ ಮಾಲೀಕರಿಗೆ ಅಪಾರ ನಷ್ಟ ಉಂಟು ಮಾಡಿವೆ. ಕಾಡಾನೆ ಹಾವಳಿಯಿಂದ ಕಾಫಿ ಬೆಳೆಯನ್ನು ಕೊಯ್ಲು ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.

ಹೆಸಗಲ್ ಗ್ರಾಮದಲ್ಲಿ ಒಂದು ವಾರದಿಂದ ಬೀಡುಬಿಟ್ಟಿರುವ 2 ಕಾಡಾನೆಗಳು ಗ್ರಾಮದ ದಿವಾಕರ, ಆದರ್ಶ, ಸೋಮಯ್ಯ ಮಾಸ್ಟರ್ ಅವರ ತೋಟದಲ್ಲಿ ಕಾಫಿ, ಅಡಕೆ, ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ. ಗಿರೀಶ್ ಅವರ ಮನೆ ಹಿಂಭಾಗ ಬೆಳೆದಿದ್ದ ಕಾಫಿ ಬಗನೆ ಮರಗಳನ್ನು ಉರುಳಿಸಿವೆ. ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡ ಬುಧವಾರ ರಾತ್ರಿ 10ಕ್ಕೆ ಹೆಸಗಲ್ ಗ್ರಾಮಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿತ್ತು. ರಾತ್ರಿ 12ಕ್ಕೆ ಮತ್ತೆ ಅದೇ ಎರಡು ಕಾಡಾನೆಗಳು ಹಿಂತಿರುಗಿ ಗ್ರಾಮದತ್ತ ಬಂದಿವೆ. ಅಷ್ಟರಲ್ಲಿ ಎರಡನೇ ಬಾರಿ ಟಾಸ್ಕ್ ಫೋರ್ಸ್ ತಂಡ ಪಟಾಕಿ ಸಿಡಿಸಿ ಬೆದರಿಸಿ ಗ್ರಾಮದತ್ತ ಬರದಂತೆ ಅರಣ್ಯಕ್ಕೆ ಅಟ್ಟಿದ್ದಾರೆ. ಕಾಡಾನೆಗಳ ಉಪಟಳದಿಂದ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದೆ.

ಕಳೆದ ವರ್ಷ ಬೇಲೂರು ಭಾಗದಿಂದ 3 ಕಾಡಾನೆಗಳು ಮಾಕೋನಹಳ್ಳಿ, ನಂದಿಪುರ ಗ್ರಾಮದ ಮೂಲಕ ಹೆಸಗಲ್ ಗ್ರಾಮಕ್ಕೆ ಬಂದಿದ್ದವು. ಅದರಲ್ಲಿ ಒಂದು ಕಾಡಾನೆ ಬೇರ್ಪಟ್ಟು ಅರಣ್ಯ ಸಿಬ್ಬಂದಿ ಕಣ್ತಪ್ಪಿಸಿ ಲೋಕವಳ್ಳಿ ಗ್ರಾಮದ ಮೂಲಕ ಸಾಗಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಹಳೇಮೂಡಿಗೆರೆ ಗ್ರಾಮದ ಮೂಲಕ ಬೇಲೂರಿನತ್ತ ತೆರಳಿದೆ. ಉಳಿದ 2 ಕಾಡಾನೆಗಳು ಲೋಕವಳ್ಳಿ ಗ್ರಾಮ ಮತ್ತು ಪಟ್ಟಣದ ಗಂಗನಮಕ್ಕಿ ಬಡಾವಣೆ ಪರಿಸರಕ್ಕೆ ಬಂದರೆ ಅನಾಹುತವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ದಾಟದಂತೆ ಅರಣ್ಯ ಇಲಾಖೆ ಸಿಬ್ಬಂದಿ ತಡೆದಿದ್ದರು. ಲೋಕವಳ್ಳಿ ಗ್ರಾಮದ ಕಾಫಿ ತೋಟದಲ್ಲಿ 2 ದಿನ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಎಲಿಫೆಂಟ್ ಟಾಸ್ಕ್ ಫೋರ್ಸ್ ಮತ್ತು ಅರಣ್ಯ ಇಲಾಖೆ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸಾರಗೋಡು ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದವು. ಆ ಎರಡೂ ಕಾಡಾನೆಗಳು ಬಿಳಗುಳ ಮತ್ತು ಹೆಸಗಲ್ ಗ್ರಾಮದತ್ತ ಆಗಾಗ ಲಗ್ಗೆಯಿಡುತ್ತ ಕಾಫಿ ತೋಟ ಮತ್ತು ಭತ್ತದ ಗದ್ದೆಗಳನ್ನು ನಿರಂತರವಾಗಿ ಧ್ವಂಸಗೊಳಿಸುತ್ತಿವೆ. ಕಾಡಾನೆ ಕಾಟದಿಂದ ಕಾಫಿ ಕೊಯ್ಲು ನಡೆಸಲು ಸಾಧ್ಯವಾಗದೆ ಬೆಳೆ ಗಿಡದಲ್ಲಿ ಉಳಿಯುವಂತಾಗಿದೆ. ಈ ಬಾರಿಯ ಕಾಫಿ ಬೆಳೆ ತೋಟದ ಮಾಲೀಕರ ಕೈಸೇರುವುದು ಅನುಮಾನ ಎಂಬಂತಾಗಿದೆ.

ಒಂದು ವರ್ಷದಿಂದ 2 ಕಾಡಾನೆಗಳು ಹೆಸಗಲ್ ಗ್ರಾಮದ ಪರಿಸರದಲ್ಲಿ ಅತ್ತಿತ್ತ ತಿರುಗಾಡುತ್ತ್ತ ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಗಿಡಗಳನ್ನು ಧ್ವಂಸಗೊಳಿಸುತ್ತಿವೆ. ಕಾಡಾನೆ ಹಾವಳಿಯಿಂದ ಜನ ಭಯಭೀತರಾಗಿದ್ದಾರೆ. ಹೆಸಗಲ್ ಗ್ರಾಮದತ್ತ ಕಾಡಾನೆಗಳು ನುಸುಳಿದರೆ ಅಲ್ಲಿರುವ ಮನೆಗಳಿಗೆ ಅಪಾಯ ಉಂಟಾಗಲಿದೆ. ಅಲ್ಲದೆ ಜನ, ಜಾನುವಾರುಗಳನ್ನು ಬಲಿ ಪಡೆಯುವುದು ನಿಶ್ಚಿತವೆಂಬಂತಾಗಿದೆ. ಕಾಡಾನೆ ಹಾವಳಿಯಿಂದ ಕಾಫಿ ಕೊಯ್ಲು ನಡೆಸಲು ಕಾರ್ಮಿಕರು ಭಯದಿಂದ ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾಫಿ ಬೆಳೆ ಗಿಡದಲ್ಲಿ ಹಾಗೇ ಉಳಿದಿದೆ. ಎಲಿಫೆಂಟ್ ಟಾರ್ಸ್ ಫೋರ್ಸ್ ತಂಡ ಕಾಡಾನೆಗಳನ್ನು ಅರಣ್ಯಕ್ಕೆ ಆಗಾಗ ಅಟ್ಟುತ್ತಲೇ ಇದೆ. ತಂಡ ಅತ್ತಹೋದ ನಂತರ ಕಾಡಾನೆಗಳು ಮತ್ತೆ ಗ್ರಾಮಕ್ಕೆ ವಾಪಸಾಗುತ್ತವೆ. ಸರ್ಕಾರ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಹೆಸಗಲ್ ಗಿರೀಶ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net