

ಚಿತ್ರದುರ್ಗ: ತರಕಾರಿ, ಆಹಾರಧಾನ್ಯ, ಸಾಂಬಾರ ಪದಾರ್ಥ, ಹಾಲು ಉತ್ಪನ್ನಗಳ ಬೆಲೆಗಳು ಗಗನಕ್ಕೇರಿದ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಬಿಸಿ ಗ್ರಾಹಕರಿಗೆ ತಗಲುವ ಸಾಧ್ಯತೆ ಎದುರಾಗಿದೆ.
ನಗರದ ಬೆರಳೆಣಿಕೆ ಹೋಟೆಲ್‌ಗಳಲ್ಲಿ ಈಗಾಗಲೇ ಕೆಲವೊಂದು ಆಹಾರದ ಬೆಲೆ ಹೆಚ್ಚಿಸಿದ್ದರೆ, ಇನ್ನೂ ಬಹುತೇಕ ಹೋಟೆಲ್‌ಗಳು ದರ ಹೆಚ್ಚಿಸುವಲ್ಲಿ ಗೊಂದಲಕ್ಕೆ ಸಿಲುಕಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಹೋಟೆಲ್ ಆಹಾರದ ಬೆಲೆ ಹೆಚ್ಚಿಸಲಾಗಿದೆ. ಹೊರ ಜಿಲ್ಲೆಗಳ ಜನರು ಮಹಾನಗರಕ್ಕೆ ನಿತ್ಯ ಬಂದು ಹೋಗುವುದರಿಂದ ದರ ಹೆಚ್ಚಳದ ಪರಿಣಾಮ ಬೀರದು. ಆದರೆ, ಮಧ್ಯಕರ್ನಾಟಕದ ಸ್ಥಿತಿಯೇ ಬೇರೆ. ಅದರಲ್ಲೂ ದೊಡ್ಡ ಹಳ್ಳಿಯಂತಿರುವ ಚಿತ್ರದುರ್ಗದ ಪರಿಸ್ಥಿತಿಯೇ ವಿಭಿನ್ನ. ಇಲ್ಲಿ ಪ್ರತಿದಿನ ಬರುವ ಕಾಯಂ ಗ್ರಾಹಕರನ್ನು ಹಿಡಿದಿಟ್ಟುಕೊಂಡು ಹೋಟೆಲ್ ನಡೆಸುವ ಸವಾಲು ಮಾಲೀಕರದ್ದು.
ನಗರದ ಕೆಲವು ಹೋಟೆಲ್‌ಗಳಲ್ಲಿ ಈಗಾಗಲೇ ಇಡ್ಲಿ, ವಡೆ ಬೆಲೆ ಪ್ಲೇಟ್‌ಗೆ 3 ರೂ. ಮತ್ತು ಕಾಫಿ-ಟೀ ದರ ಒಂದು ಕಪ್‌ಗೆ 2 ರೂ. ಹೆಚ್ಚು ಮಾಡಲಾಗಿದೆ. ಆದರೆ, ಬಹುತೇಕ ಹೋಟೆಲ್‌ಗಳಲ್ಲಿ ಇನ್ನೂ ದರ ಹೆಚ್ಚಿಸಿಲ್ಲ. ಈ ಮೂಲಕ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆದು ಅದರಲ್ಲಿಯೇ ಲಾಭ ಕಾಣುವ ಚಿಂತನೆಯಲ್ಲಿದ್ದಾರೆ.
ಹೋಟೆಲ್ ಉದ್ಯಮ ಎಂಬುದು ವ್ಯವಹಾರದ ಜತೆಗೆ ಸೇವೆ ಇದ್ದಂತೆ. ಜನರಿಗೆ ಅನುಕೂಲ ಆಗುವ ರೀತಿ ಆಹಾರ ಬೆಲೆ ಹೆಚ್ಚಳ ಮಾಡಲೇಬೇಕು. ಆದರೆ, ಗ್ರಾಹಕರ ಸಂಖ್ಯೆ ಕ್ಷೀಣಿಸಿದರೆ ನಿರ್ವಹಣೆ ಕಷ್ಟ ಎಂಬುದು ಹೋಟೆಲ್ ಮಾಲೀಕರ ಅನುಭವದ ಮಾತು.
ಕೋಟೆ ನಗರಿ ಎಂದೇ ಪ್ರಸಿದ್ಧವಾಗಿರುವ ನಗರದಲ್ಲಿ ಮಸಾಲೆ, ಬೆಣ್ಣೆ ಇತರ ವಿಶೇಷ ದೋಸೆಗಳ ಬೆಲೆಯನ್ನು ಪ್ಲೇಟ್‌ಗೆ 90 ರೂ. ನಿಗದಿಪಡಿಸಿದ್ದರೆ ಇನ್ನೂ ಕೆಲ ಹೋಟೆಲ್‌ಗಳ ಮಾಲೀಕರು ಯೋಚಿಸಿ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಾಗಿ ಬರುವ ಪ್ರದೇಶದಲ್ಲಿ ಬೆಲೆ ಹೆಚ್ಚಿಸಿದರೆ ವ್ಯವಹಾರ ಕಷ್ಟ ಎಂಬ ಆತಂಕದ ಮಾತೂ ಕೇಳಿ ಬರುತ್ತಿದೆ.
ನಮ್ಮ ಹೋಟೆಲ್‌ಗೆ ನಿತ್ಯ 2500 ರೂ. ತರಕಾರಿ ಬೇಕಾಗುತ್ತಿತ್ತು. ಈಗ 6000 ರೂ. ನೀಡಿದರೂ ಕಡಿಮೆ ಎನ್ನುವಂತಾಗಿದೆ. ಇನ್ನು ಆಹಾರ ಧಾನ್ಯ, ಸಿಲಿಂಡರ್, ವಿದ್ಯುತ್ ಬಿಲ್, ಕೆಲಸಗಾರರ ವೇತನ ಎನ್ನುತ್ತ ಹೋದರೆ ಹೋಟೆಲ್ ನಡೆಸುವುದೇ ಬಹಳ ಕಷ್ಟ. ಉದ್ಯಮ ಬಿಡಬಾರದು ಎಂಬ ನಿಟ್ಟಿನಲ್ಲಿ ಹೋಟೆಲ್ ನಡೆಸುವಂತಾಗಿದೆ ಎನ್ನುತ್ತಾರೆ ವ್ಯವಸ್ಥಾಪಕರೊಬ್ಬರು.
ಇನ್ನು ಹಾಲು, ಬೆಣ್ಣೆ, ತುಪ್ಪದ ಬೆಲೆ ಹೆಚ್ಚಳದಿಂದಾಗಿ ಬೇಕರಿ ಉತ್ಪನ್ನಗಳ ಬೆಲೆಯೂ ಹೆಚ್ಚಾಗುವ ಸಂಭವವಿದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಇಂದಿನಿಂದ ಸ್ವೀಟ್‌ಗಳ ಬೆಲೆಯನ್ನು ಶೇ.5ರಷ್ಟು ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಾರೆ ಕೆಲ ಬೇಕರಿ ಮಾಲೀಕರು.
ಬಡ ಹಾಗೂ ಮಧ್ಯಮ ವರ್ಗದ ಜನರು ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸುವಂತಾಗಿದೆ. ಸಣ್ಣಪುಟ್ಟ ಹೋಟೆಲ್ ಮಾಡಿಕೊಂಡು ಜೀವನ ನಡೆಸುವುದು ದುಸ್ತರವಾಗಿದೆ ಎಂಬುದು ಸಣ್ಣ ಹೊಟೇಲ್ ಮಾಲೀಕರ ಅಳಲು.
*ಕೋಟ್
ಚಿತ್ರದುರ್ಗ ಹೋಟೆಲ್ ಮಾಲೀಕರ ಸಂಘದಿಂದ ಹೋಟೆಲ್‌ಗಳಲ್ಲಿ ಆಹಾರ ಬೆಲೆ ಹೆಚ್ಚಿಸುವ ಕುರಿತು ಯಾವುದೇ ಕರೆ ನೀಡಿಲ್ಲ. ಆದರೆ, ಈ ಸಂಬಂಧ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದು, ಅಲ್ಲಿ ಬಹುಜನರ ಅಭಿಪ್ರಾಯ ಸಂಗ್ರಹದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಪ್ರಜ್ಞಲ್ ಅರುಣ್‌ಕುಮಾರ್
ಅಧ್ಯಕ್ಷರು, ಹೋಟೆಲ್ ಮಾಲೀಕರ ಸಂಘ, ಚಿತ್ರದುರ್ಗ
*ಕೋಟ್
ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ಬೇಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಬೆಲೆ ಹೆಚ್ಚಿಸುವುದು ಅನಿವಾರ್ಯ. ಈ ವಿಷಯಲ್ಲಿ ಹೋಟೆಲ್ ಮಾಲೀಕರ ಸಂಘ, ಗ್ರಾಹಕರು ಮತ್ತು ಹೋಟೆಲ್ ಮಾಲೀಕರ ಹಿತದೃಷ್ಟಿ ಮುಂದಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಿದೆ.
ಎಚ್.ಎನ್.ಲೋಕೇಶ್‌ಕುಮಾರ್
ಹೋಟೆಲ್ ಉದ್ಯಮಿ, ಚಿತ್ರದುರ್ಗ
*ಕೋಟ್
ಬೆಲೆ ಕುಸಿತ ಕಾರಣಕ್ಕೆ ಟೊಮೋಟೋ, ಈರುಳ್ಳಿ ಸೇರಿ ಅನೇಕ ತರಕಾರಿಗಳನ್ನು ರೈತರು ರಸ್ತೆಗೆ ಚೆಲ್ಲಿದ ದೃಶ್ಯ ಕಣ್ಮುಂದೆ ಇದೆ. ಆದ್ದರಿಂದ ಹೋಟೆಲ್ ಸಂಘದವರು ಪ್ರಸ್ತುತ ತರಕಾರಿ ಬೆಲೆ ಏರಿಕೆ ಕಾರಣಕ್ಕೆ ದರ ಹೆಚ್ಚಿಸುವ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ರೈತರ ಹಿತಕ್ಕಾಗಿ ಹಾಲಿನ ದರ ಲೀಟರ್‌ಗೆ 3 ರೂ. ಹೆಚ್ಚಾಗಿದೆ. ಹಾಗೇಂದು ಒಂದು ಕಪ್ ಟೀ-ಕಾಫಿಗೆ 2 ರೂ. ಹೆಚ್ಚಿಸುವುದು ಎಷ್ಟು ಸರಿ. ಗ್ರಾಹಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಳ್ಳಬೇಕು.
ಆರ್.ಗಂಗಾಧರ್
ಪ್ರಧಾನ ಕಾರ್ಯದರ್ಶಿ, ವಕೀಲರ ಸಂಘ, ಚಿತ್ರದುರ್ಗ