

ಬಾಳೆಹೊನ್ನೂರು: ಅತಿ ಹೆಚ್ಚು, ಅತಿ ಕಡಿಮೆ ಮಳೆ ಬೀಳುವ ಪ್ರದೇಶದ ಕಾಫಿ ತೋಟದಲ್ಲಿ ಪ್ರತಿ ವರ್ಷ ಉತ್ತಮ ಸಲು ನೀಡುವ, ರೋಗ ನಿರೋಧಕ ಗುಣ ಹೊಂದಿರುವ ಯಾವುದಾದರೂ ಗಿಡಗಳಿದ್ದಲ್ಲಿ ಕಾಫಿ ಸಂಶೋಧನಾ ಕೇಂದ್ರಕ್ಕೆ ಮಾಹಿತಿ ನೀಡಿ ನೋಂದಣಿ ಮಾಡಿಕೊಂಡಲ್ಲಿ ಆ ತಳಿಯ ಕುರಿತು ಹೆಚ್ಚಿನ ಸಂಶೋಧನೆ ನಡೆಸಿ ಹೊಸ ತಳಿ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಸಿಆರ್‌ಎಸ್ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ಸಸ್ಯಶಾಸ ವಿಭಾಗದ ವಿಜ್ಞಾನಿ ಕೆ.ಪಿ.ಶ್ರೀಹರ್ಷ ಹೇಳಿದರು.
ಇಂಡಿಯನ್ ಪೆಪ್ಪರ್ ಲೀಗ್ (ಐಪಿಎಲ್) ಹಾಗೂ ಕಾಫಿ ಮಂಡಳಿ ಕೊಪ್ಪ ವಿಸ್ತರಣಾ ವಿಭಾಗ ಆಶ್ರಯದಲ್ಲಿ ಆನೆಕಲ್ಲುಮಠದಲ್ಲಿ ಆಯೋಜಿಸಿದ್ದ ಕಾಫಿ ಕುರಿತ ವಿಚಾರ ಸಂಕಿರಣ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕ್ಲೋನಿಂಗ್, ಟಿಶ್ಯೂಕಲ್ಚರ್ ಹಾಗೂ ಇತ್ತೀಚಿನ ದಿನಗಳಲ್ಲಿ ರೂಟ್ ಬಾಲ್ ಜನಪ್ರಿಯವಾಗುತ್ತಿದೆ. ಸೂಕ್ಷ್ಮಪೋಷಕಾಂಶಗಳ ಕೊರತೆಯಾದಾಗ ಗಿಡಗಳಿಗೆ ರೋಗ ಬಾಧೆ ಜಾಸ್ತಿಯಾಗುತ್ತದೆ. ಆದ್ದರಿಂದ ನಿಗದಿತ ಅವಧಿಯಲ್ಲಿ ತೋಟಕ್ಕೆ ಸೂಕ್ಷ್ಮಪೋಷಕಾಂಶ ನೀಡುವುದು ಅವಶ್ಯ. ಇದೂವರೆಗೂ ಕೊಳೆರೋಗ ಬಾರದ ಗಿಡಗಳು ಸಿಕ್ಕಿಲ್ಲ. ಸಂಶೋಧನಾ ಕೇಂದ್ರ ಒಟ್ಟು ಮೂರು ವಿಧದ ಕಾಫಿ ತಳಿಗಳನ್ನು ಇದೂವರೆಗೆ ಬಿಡುಗಡೆ ಮಾಡಿದೆ ಎಂದರು.
ಐಪಿಎಲ್ ಉಪಾಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ, ಕಾಳುಮೆಣಸಿನ ಬಳ್ಳಿಗಳಿಗೆ ಮಳೆಗಾಲದಲ್ಲಿ ಕೊಳೆ ರೋಗ ಬಾರದಂತೆ ತಡೆಯಲು ಬಳ್ಳಿಯ ಬುಡಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಬೇಕು. ಬಳ್ಳಿಗಳಲ್ಲಿ ಒಂದೊಂದು ಹಣ್ಣಾಗುವಾಗಲೇ ಎಲ್ಲವನ್ನೂ ಕೊಯ್ಲು ಮಾಡುವುದು ಒಳ್ಳೆಯದು. ಆಗ ಮುಂದಿನ ವರ್ಷದ ಸಲಿನ ಮೇಲೆ ಪರಿಣಾಮ ಬೀರುವುದಿಲ್ಲ. ರೋಗ ಇರುವ ಕಾಳುಮೆಣಸು ಬಳ್ಳಿಯನ್ನು ಬುಡ ಸಮೇತ ಕಿತ್ತು ತೋಟದಿಂದ ದೂರ ಹಾಕಿ ಆ ಜಾಗಕ್ಕೆ ಸುಣ್ಣ ಹಾಕಿ 15 ದಿನ ಬಿಟ್ಟು ಬೇರೆ ಕಾಳುಮೆಣಸಿನ ಗಿಡ ನೆಡಬೇಕು ಎಂದು ಸಲಹೆ ನೀಡಿದರು.
ಐಪಿಎಲ್ ಅಧ್ಯಕ್ಷ ಎಚ್.ವಿ.ಪ್ರದೀಪ್‌ಕುಮಾರ್, ಉಪಾಧ್ಯಕ್ಷ ಕೆ.ಎಸ್.ಸತ್ಯಪ್ರಕಾಶ್, ಚಂದ್ರಶೇಖರ್ ಹೆಗ್ಡೆ ಕಲ್ಕುಳಿ, ಇಂದಿರಮ್ಮ ಎಸ್ಟೇಟ್ ಮಾಲೀಕ ಪ್ರದೀಪ್ ಜಯಪುರ, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ನಿರ್ದೇಶಕರಾದ ಎಚ್.ಎಂ.ಚನ್ನಕೇಶವ, ಎಚ್.ಆರ್.ಆದರ್ಶ, ಕಾಫಿ ಸಂಶೋಧನಾ ಕೇಂದ್ರದ ಎಸ್‌ಎಲ್‌ಒ ಪ್ರಭು ಗೌಡ, ವಿಸ್ತರಣಾ ನಿರೀಕ್ಷಕ ಎಸ್.ಬಿ.ಮಂಜುನಾಥ್, ಮಹೇಶ್, ದಾದಾಫೀರ್, ವಿಜ್ಞಾನಿಗಳಾದ ಡಾ. ಚಂದ್ರಶೇಖರ್, ಡಾ. ರಂಜಿನಿ ಇದ್ದರು.