

ನುಗ್ಗೇಹಳ್ಳಿ: ಆಂಗ್ಲ ಮಾಧ್ಯಮದ ಮೇಲಿನ ಪಾಲಕರ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪುತ್ತಿವೆ ಎಂದು ಸಕಲೇಶಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್ ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2002-03ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದರ ಜತೆಗೆ ಇತರರಿಗೂ ಮಾಹಿತಿ ನೀಡುವುದು ಅಗತ್ಯ. ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರು ಉನ್ನತ ಶಿಕ್ಷಣ ಪಡೆದಿದ್ದು ಉತ್ತಮವಾಗಿ ಬೋಧನೆ ಮಾಡುತ್ತಾರೆ. ಅವರ ಅನುಭವದಿಂದ ಮಕ್ಕಳನ್ನು ಸುಲಭ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಸುತ್ತಾರೆ. ಖಾಸಗಿ ಶಾಲೆಗಳಲ್ಲಿ ಇಂತಹ ವ್ಯವಸ್ಥೆ ಕಡಿಮೆ ಎಂದರು.
ಉಪನ್ಯಾಸಕರಾದ ಬೀರೇಗೌಡ, ಸುಮಾ, ಮುರುಳಾರಾಧ್ಯ, ನಿವೃತ್ತ ಉಪನ್ಯಾಸಕಿ ನಾಗರತ್ನಾ ಅವರಿಗೆ ಹಳೆಯ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ರಾಜ್ಯ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಅತ್ತಿಹಳ್ಳಿ ವೇಣುಗೋಪಾಲ್, ಪೊಲೀಸ್ ಪೇದೆಗಳಾದ ಎಂ. ಎನ್.ಮೋಹನ್, ಶ್ರೀನಿವಾಸ್, ಗ್ರಾಪಂ ಸದಸ್ಯ ಹೊನ್ನೇಗೌಡ, ಮುಖಂಡರಾದ ರಾಮಪ್ರಸಾದ್, ಮಧುಸೂದನ್, ಬಿ.ಎನ್.ಕೃಷ್ಣಮೂರ್ತಿ, ದೇವರಾಜ್, ಕಾಂತರಾಜ್, ಲತಾ, ಶ್ವೇತಾ ಇತರರಿದ್ದರು.