ಕಾನೂರು ಜಲಪಾತ, ಆಯತಪ್ಪಿದರೆ ಪ್ರಪಾತ

07 YLP 01 A
Published on

ಶ್ರೀಧರ ಅಣಲಗಾರ ಯಲ್ಲಾಪುರ

ತಾಲೂಕಿನ ಬಾಸಲ ಸಮೀಪದ ಕಾನೂರು ಜಲಪಾತವು ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆಯುತ್ತಿದೆ. ನಿತ್ಯ ನೂರಾರು ಪ್ರವಾಸಿಗರು ದೂರದ ಊರುಗಳಿಂದ ಆಗಮಿಸುತ್ತಿದ್ದಾರೆ. ಆದರೆ, ಮೇಲ್ಭಾಗದಲ್ಲಿ ನಿಂತು ಕೆಳಗೆ ನೀರು ಬೀಳುವುದನ್ನು ವೀಕ್ಷಿಸಬೇಕಾಗಿರುವುದರಿಂದ ಈ ಸ್ಥಳ ಅಪಾಯಕಾರಿಯಾಗಿ ಪರಿಣಮಿಸಿದೆ. ಹೀಗಿದ್ದರೂ ಸಂಬಂಧಪಟ್ಟವರು ಇಲ್ಲಿ ಸುರಕ್ಷೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮಾವಿನಮನೆ ಗ್ರಾ.ಪಂ. ವ್ಯಾಪ್ತಿಯ ಬಾಸಲದಿಂದ 2-3 ಕಿ.ಮೀ. ದೂರದಲ್ಲಿರುವ ಕಾನೂರು ಜಲಪಾತವು ಹಳ್ಳವೊಂದರಿಂದ ನಿರ್ವಣವಾಗಿದೆ. ಕಾನೂರಿನಲ್ಲಿ ಇತರ ಜಲಪಾತಗಳಂತೆ ಜಲಧಾರೆಯನ್ನು ಎದುರಿನಿಂದ ನಿಂತು ಇದನ್ನು ನೋಡಲಾಗದು. ಬದಲಾಗಿ ನೀರು ಬೀಳುವ ಸ್ಥಳದಿಂದ, ಅಂದರೆ ಮೇಲಿನಿಂದಲೇ ನಿಂತು ವೀಕ್ಷಿಸಬೇಕು. ಹಳ್ಳದಲ್ಲಿ ಅಪಾಯಕಾರಿ ಗುಂಡಿಗಳಿದ್ದು, ನೀರು ಬೀಳುವುದನ್ನು ಮೇಲೆ ನಿಂತು ವೀಕ್ಷಿಸಬೇಕಾಗಿರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಆಯತಪ್ಪಿ ಬಿದ್ದರೆ ನೀರಿನ ಜತೆ ಪ್ರಪಾತ ಸೇರುವ ಅಪಾಯವಿದೆ. ನಿತ್ಯ ನೂರಾರು ಪ್ರವಾಸಿಗರು ದೂರದ ಊರುಗಳಿಂದ ಜಲಪಾತಕ್ಕೆ ಬರುತ್ತಾರೆ. ಕಳೆದ ವರ್ಷ ಇಲ್ಲಿ ಕಾಲುಜಾರಿ ಬಿದ್ದು ಹುಬ್ಬಳ್ಳಿಯ ಪ್ರವಾಸಿಗನೊಬ್ಬ ಮೃತಪಟ್ಟಿದ್ದ. ಈ ಬಾರಿಯೂ ಭಾನುವಾರವಷ್ಟೇ ಹುಬ್ಬಳ್ಳಿಯ ಯುವಕನೊಬ್ಬ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಹೀಗೆ ಪ್ರವಾಸಿಗರಿಗೆ ಅಪಾಯವಾಗುವ ಘಟನೆಗಳು ನಡೆಯುತ್ತಿದ್ದರೂ ಜಲಪಾತ ವೀಕ್ಷಣೆಯ ಸ್ಥಳದಲ್ಲಿ ಸ್ಥಳೀಯ ಆಡಳಿತದಿಂದಾಗಲಿ, ಸಂಬಂಧಪಟ್ಟವರಿಂದಾಗಲಿ ಸುರಕ್ಷೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆಯಿಂದ ನಿರ್ವಹಣೆಯ ಹೆಸರಿನಲ್ಲಿ ಸೂಚನಾ ಫಲಕಗಳ ಅಳವಡಿಕೆ, ರಸ್ತೆ ದುರಸ್ತಿ ಸೇರಿ ಕೆಲ ಕಾಮಗಾರಿಗಳು ನಡೆದಿವೆ. ಆದರೆ, ಇಲಾಖೆ ಪ್ರವಾಸಿಗರ ಸುರಕ್ಷೆಗೆ ಇದು ಸಾಕಾಗುತ್ತಿಲ್ಲ.

ಪ್ರವಾಸಿಗರಿಂದ ಪರಿಸರ ಮಾಲಿನ್ಯ
ಜಲಪಾತಕ್ಕೆ ಬರುವ ಪ್ರವಾಸಿಗರು ಸುತ್ತಮುತ್ತಲಿನ ಪರಿಸರವನ್ನು ಮಾಲಿನ್ಯಗೊಳಿಸುತ್ತಿರುವುದು ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಊಟ-ತಿಂಡಿಗಳನ್ನು ತಂದು ಅಲ್ಲೇ ತಿಂದು, ಪ್ಲಾಸ್ಟಿಕ್ ಪ್ಲೇಟ್, ಹೆಚ್ಚಾದ ತಿಂಡಿಗಳನ್ನು ಎಸೆಯಲಾಗುತ್ತಿದೆ. ಮದ್ಯಪಾನ ಮಾಡಿ ಬಾಟಲಿಗಳನ್ನು ಅಲ್ಲೇ ಬಿಸಾಡಲಾಗುತ್ತದೆ. ಈ ರೀತಿ ಪರಿಸರ ಹಾಳು ಮಾಡುತ್ತಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲಿಂದಲೋ ಬಂದು ತಮ್ಮೂರಿನ ಪರಿಸರವನ್ನು ಹಾಳು ಮಾಡಿ ಹೋಗುವ ಪ್ರವಾಸಿಗರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾನೂರು ಜಲಪಾತದಲ್ಲಿ ಪ್ರವಾಸಿಗರಿಗೆ ಸುರಕ್ಷೆ ಇಲ್ಲ. ಜಲಪಾತ ವೀಕ್ಷಣೆಯ ಸ್ಥಳದಲ್ಲಿ ಅಗತ್ಯ ಸುರಕ್ಷೆ ಕ್ರಮ ಕೈಗೊಳ್ಳುವಂತೆ ನಾವು ತಾಲೂಕು ಆಡಳಿತಕ್ಕೆ ಕಳೆದ ವರ್ಷ ಮನವಿ ಸಲ್ಲಿಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಕುರಿತು ಗಮನ ಹರಿಸಬೇಕು. ಮದ್ಯದ ಬಾಟಲಿಯನ್ನು ಒಡೆದು ಎಸೆಯುವುದು, ಊಟ-ತಿಂಡಿ, ಪ್ಲೇಟ್​ಗಳನ್ನು ಬಿಸಾಕುವ ಕಾರ್ಯಗಳನ್ನು ಪ್ರವಾಸಿಗರು ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಕೆಲಸ ಆಗಬೇಕು. | ಗಣಪತಿ ವಾಗಳ್ಳಿ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net