ಕಾನೂನುಗಳಿಗೆ ತಾಯಿ ಬೇರು ಸಂವಿಧಾನ: ಬಿ.ಕೆ.ರವಿಕಾಂತ

ಕಾನೂನುಗಳಿಗೆ ತಾಯಿ ಬೇರು ಸಂವಿಧಾನ: ಬಿ.ಕೆ.ರವಿಕಾಂತ
Published on

ಹಾಸನ :ಎಲ್ಲಾ ಕಾನೂನುಗಳಿಗೆ ತಾಯಿ ಬೇರು ಸಂವಿಧಾನ, ಇದರಲ್ಲಿ ಹಿರಿಯ ನಾಗರಿಕರಿಗೆ ಕಿರುಕುಳ, ದೌರ್ಜನ್ಯ ಹಾಗೂ ಅವರ ರಕ್ಷಣೆಗೆ ಕಾನೂನುಗಳಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶಯದಲ್ಲಿ ನಗರದ ಸರ್.ಎಂ.ವಿಶ್ವೇಶ್ವರಯ್ಯ ಸಮುದಾಯ ಭವನದಲ್ಲಿ ಭಾನುವಾರ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ, ಹಿರಿಯ ನಾಗರಿಕರ ಪಾಲನೆ -ಪೋಷಣೆ ಕಾಯ್ದೆ ಮತ್ತು ನಿಯಮಗಳ ಕುರಿತು ಉಪನ್ಯಾಸ ನೀಡಿದ ಅವರು, ಎಲ್ಲರೂ ತಮ್ಮ ಮನೆಯಲ್ಲಿರುವಂತಹ ಹಿರಿಯ ನಾಗರಿಕರನ್ನ ಗೌರವಿಸುವುದರ ಜೊತೆಗೆ ಅವರನ್ನು ಖುಷಿಯಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮಕ್ಕಳನ್ನು ತಂದೆ-ತಾಯಿಯವರು ಚೆನ್ನಾಗಿ ಸಾಕಿ, ವಿದ್ಯೆ ಕೊಡಿಸಿ, ಅವರ ಜೀವನವನ್ನು ರೂಪಿಸುತ್ತಾರೆ. ಆದರೆ ಮಕ್ಕಳು ನಂತರದ ದಿನಗಳಲ್ಲಿ ಅವರನ್ನ ಕಡೆಗಣಿಸಿ ವೃದ್ಧಾಶ್ರಮ ಹಾಗೂ ಇನ್ನಿತರ ಕಡೆ ಸೇರಿಸುವಂತಹ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರ ಮೇಲೆ ಹೆಚ್ಚಾಗಿ ಕಿರುಕುಳ, ದೌರ್ಜನ್ಯ ಮತ್ತು ಅವರಿಗೆ ರಕ್ಷಣೆ ಇಲ್ಲದತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ 2007ರಲ್ಲಿ ಕಾಯ್ದೆಯನ್ನು ಜಾರಿಗೊಳಿಸಿತು. ಇದರಿಂದ ಅದೆಷ್ಟು ಹಿರಿಯ ನಾಗರಿಕರಿಗೆ ನ್ಯಾಯ ದೊರಕಿದ್ದು, ಇಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಅದೇ ರೀತಿ ಎಲ್ಲರೂ ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಮಕ್ಕಳು ಆಸ್ತಿಯನ್ನು ಪಡೆದುಕೊಂಡು ತಂದೆ-ತಾಯಿಯನ್ನು ಬೀದಿಗೆ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ನ್ಯಾಯಾಲಯದ ಮೂಲಕ ತಮಗೆ ಅನ್ಯಾಯವಾಗುತ್ತಿರುವುದನ್ನ ಸರಿಪಡಿಸಿಕೊಳ್ಳಬಹುದು ಮತ್ತು ತಮ್ಮ ಆಸ್ತಿಯನ್ನು ವಾಪಸ್ ಪಡೆದುಕೊಳ್ಳಬಹುದು. ಪ್ರತಿಯೊಬ್ಬರಿಗೂ ಸಂವಿಧಾನ ಹಕ್ಕುಗಳ ಜೊತೆಗೆ ಜವಾಬ್ದಾರಿಗಳನ್ನು ಕೂಡ ನೀಡಿದೆ ಎಂಬುದನ್ನು ಯಾರು ಮರೆಯಬಾರದು ಎಂದು ಹೇಳಿದರು.

ಹಿರಿಯ ನಾಗರಿಕರಿಗೆ ವೃದ್ಯಾಪ ವೇತನ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು ಮತ್ತು ತಾಲೂಕು ಮಟ್ಟದಲ್ಲಿ ಇಂತಹ ಸಮಸ್ಯೆಗಳಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹಿರಿಯ ನಾಗರಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ನಿಮಗೆ ವಿಶೇಷವಾದಂತಹ ಕಾನೂನುಗಳಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಅದರ ಬಗ್ಗೆ ಹೆಚ್ಚು ಅರಿವು ಮೂಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕ್ಷಮಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪರಪ್ಪಸ್ವಾಮಿ ಮಾತನಾಡಿ, ಹಿರಿಯ ನಾಗರಿಕರ ಮಾರ್ಗದರ್ಶನ, ಸಲಹೆ ಸೂಚನೆಗಳು ಯುವಕರಿಗೆ ಅತ್ಯವಶ್ಯಕವಾಗಿದೆ, ಆದರೆ ಇದನ್ನ ಯಾರು ಕೂಡ ಪಾಲಿಸುತ್ತಿಲ್ಲ ಇದರಿಂದಲೇ ಯುವಕರು ತಮ್ಮ ಜೀವನದಲ್ಲಿ ಸಾಕಷ್ಟು ತೊಂದರೆ ಗಳನ್ನ ಅನುಭವಿಸಬೇಕಾಗುತ್ತದೆ ಎಂದರು.

ಹಿರಿಯ ನಾಗರಿಕರಿಗೆ ಸರ್ಕಾರದ ವತಿಯಿಂದ ಹೆಚ್ಚು ಸೌಲಭ್ಯಗಳು ಸಿಗುತ್ತಿಲ್ಲ ಆದರೆ ಪ್ರತಿಯೊಬ್ಬರು ತಮ್ಮ ಮನೆಯ ತಂದೆ-ತಾಯಿ, ಅಜ್ಜ- ಅಜ್ಜಿ ಇವರನ್ನ ಚೆನ್ನಾಗಿ ನೋಡಿಕೊಳ್ಳುವ ಮೂಲಕ ಗೌರವದಿಂದ ಕಾಣಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪಾರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಮಾತನಾಡಿ, ಹಿರಿಯ ನಾಗರಿಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ನೆಮ್ಮದಿಯ ಜೀವನವನ್ನು ಸಾಗಿಸಬೇಕು ಇದಕ್ಕೆ ನಾವೆಲ್ಲರೂ ಅವರಿಗೆ ಸಹಕರಿಸಬೇಕು ಮತ್ತು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.

ನೂರಾರು ಜನ ಹಿರಿಯ ನಾಗರಿಕರು ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಅಲ್ಲದೆ ಅವರು ವಿವಿಧ ಆಟ ಹಾಗೂ ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ ಇಂತಹ ವಯಸ್ಸಿನಲ್ಲಿ ಲವಲವಿಕೆಯ ಜೀವನ ನಡೆಸುತ್ತಿರುವ ಇವರು ನಮಗೆ ಮಾರ್ಗದರ್ಶಕರು ಎಂದರು.

ಈ ಕಾರ್ಯಕ್ರಮದಲ್ಲಿ ಶತಾಯುಷಿಗಳಾಗಿ ಚುನಾವಣೆಯಲ್ಲಿ ಭಾಗವಹಿಸಿದಂತಹ ಸುಧಾಕರಯ್ಯ, ನಿಂಗಮ್ಮ, ಕಾಳಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ವಿವಿಧ ಆಟ ಮತ್ತು ಸಾಂಸ್ಕೃತಿಕ ಸ್ಪರ್ಧೆವಿಜೇತರಾದಂತಹ ಹಿರಿಯ ನಾಗರಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸ್ವತಂತ್ರ ಹೋರಾಟಗಾರ ಎಚ್.ಎಂ. ಶಿವಣ್ಣ, ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹಾಂತಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬೋರೇಗೌಡ, ಮಾಜಿ ಅಧ್ಯಕ್ಷ ಅನಂತರಾಮು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಆರ್. ಸುರೇಶ್, ಜಿಲ್ಲಾ ವಿಕಲಚೇತನ ಹಾಗು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಆರ್.ಅನುಪಮಾ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net