

ಅರಸೀಕೆರೆ: ಹಬ್ಬ, ಹರಿದಿನಗಳ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಲೆತ್ನಿಸಿದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಗುರುವಾರ ನಗರದ ಗಣಪತಿ ಪೆಂಡಾಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ವಿಭಿನ್ನ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ನಾಡು ಪ್ರಸಿದ್ಧವಾಗಿದ್ದು ಹಬ್ಬ,ಹರಿದಿನಗಳ ಹೆಸರಿನಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೆ ತಕ್ಕ ಶಾಸ್ತಿ ಮಾಡಲಾಗುವುದು. ಜೂಜು, ಮಟ್ಕಾ ಸೇರಿ ಎಲ್ಲ ಬಗೆಯ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲಾಗಿದೆ. ರಿಕ್ರಿಯೇಷನ್ ಹೆಸರಿನಲ್ಲಿ ಜೂಜಾಟ ನಡೆಸುತ್ತಿದ್ದ ಹೊಳೆನರಸೀಪುರ ಹಾಗೂ ಸಕಲೇಶಪುರದ ಕೆಲ ಕ್ಲಬ್‌ಗಳಿಗೆ ಬೀಗ ಜಡಿಯಲಾಗಿದ್ದು ಪ್ರಭಾವಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದರು.
ಗೋಹತ್ಯೆ ತಿದ್ದಪಡಿ ಮಸೂದೆ ಜಾರಿಗೊಳಿಸಿದ ಬಳಿಕ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿಪ್ರಕರಣ ದಾಖಲಿಸಲಾಗಿದ್ದು ದುಷ್ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ. ಸಂಚಾರಿ ಠಾಣೆ ಆರಂಭಿಸುವ ಕುರಿತು ಪ್ರಕ್ರಿಯೆ ಪ್ರಗತಿಯಲ್ಲಿದ್ದು ಒಂದಷ್ಟು ನಿಯಾಮವಳಿಗಳಿವೆ. ಗ್ರಾಮಾಂತರ ಹಾಗೂ ನಗರಠಾಣೆ ಸಿಬ್ಬಂದಿ ಕೊರತೆ ನೀಗಿಸಲು ಇಲಾಖೆ ವತಿಯಿಂದ ಕ್ರಮ ವಹಿಸಲಾಗುವುದು ಎಂದರು.
ಡಿವೈಎಸ್‌ಪಿ ಅಶೋಕ್, ನಗರಠಾಣೆ ಇನ್ಸ್‌ಪೆಕ್ಟರ್ ಸೋಮೇಗೌಡ ಇದ್ದರು.