ಕಾನೂನು ಸಲಹೆ ಕೇಂದ್ರಕ್ಕೆ ಸಿಬ್ಬಂದಿಯನ್ನು ನೇಮಿಸಿ, ಯುವಶಕ್ತಿ ಸಂಸ್ಥೆಯ ಸ್ವಯಂಸೇವಕರ ಆಗ್ರಹ, ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

08 Nela Ph 01 Tahasildar manavi
Published on

ನೆಲಮಂಗಲ: ತಾಲೂಕು ಕಚೇರಿಯ ಉಚಿತ ಕಾನೂನು ಸಲಹೆ ಮತ್ತು ನೆರವು ಕೇಂದ್ರಕ್ಕೆ ಸಿಬ್ಬಂದಿಯನ್ನು ನೇಮಿಸಿ, ಜನರಿಗೆ ಅನುಕೂಲ ಮಾಡಿಕೊಡುವಂತೆ ಯುವಶಕ್ತಿ ಸಂಸ್ಥೆಯ ಸ್ವಯಂಸೇವಕರು ತಹಸೀಲ್ದಾರ್ ಕೆ. ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಸಮಾವೇಶಗೊಂಡ ಸ್ವಯಂಸೇವಕರು, ಹಲವು ವರ್ಷಗಳ ಹಿಂದೆ ತಾಲೂಕು ಕಚೇರಿಯಲ್ಲಿ ಆರಂಭವಾಗಿದ್ದ ಉಚಿತ ಕಾನೂನು ಸಲಹೆ ಮತ್ತು ನೆರವು ಕೇಂದ್ರದಲ್ಲಿ ಯಾವುದೇ ಸಲಹೆಗಾರರನ್ನು ನೇಮಿಸಿಲ್ಲ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಇದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಸೂಕ್ತ ಕಾನೂನು ಸಲಹೆ ನೀಡುವ ಸಲಹೆಗಾರರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ. ಮಂಜುನಾಥ್ ಅವರು ಮಾತನಾಡಿ, ಉಚಿತ ಕಾನೂನು ಸಲಹೆ ಮತ್ತು ನೆರವು ಕೇಂದ್ರದಲ್ಲಿ ಸಲಹೆಗಾರರು ಹಾಗೂ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಜತೆ ಚರ್ಚಿಸಿ, ಸೂಕ್ತ ಸಲಹೆಗಾರರನ್ನು ನೇಮಕ ಮಾಡಲಾಗುವುದು ಎಂದರು.

ಯುವಶಕ್ತಿ ಸಂಸ್ಥೆ ನಗರ ಸಂಚಾಲಕ ಡಿ.ಅರ್. ಅನಂತ್‌ಕುಮಾರ್, ಸಾಮಾಜಿಕ ಜಾಲತಾಣ ಮುಖ್ಯಸ್ಥ ವಿನಯ್‌ಚಂದ್, ಮುಖಂಡರಾದ ಬೊಮ್ಮನಹಳ್ಳಿ ನಾಗರಾಜು, ಶಿವಕುಮಾರ್, ಸದಸ್ಯರಾದ ಜೆ. ಜೇತನ್, ನಂದೀಶ್, ಮದನ್‌ಕುಮಾರ್, ಭೂಮಿಕಾ ಎಸ್.ರಾವ್, ಹೇಮಲತಾ, ದಿವ್ಯಾ, ತ್ರಿವೇಣಿ, ಲೀಲಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net