ಕಾನೂನು ವೃತ್ತಿಯಲ್ಲಿ ನೈತಿಕತೆ ಮುಖ್ಯ:ಕುಲಪತಿ ಪ್ರೊ.ವೆಂಕಟರಾವ್

mysore
Published on

ಮೈಸೂರು: ಕಾನೂನು ವೃತ್ತಿಯಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗೋವಾದ ಇಂಡಿಯಾ ಕಾನೂನು ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೆಂಕಟರಾವ್ ಹೇಳಿದರು.

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಎನ್.ನಂಜೇಗೌಡ ಸ್ಮಾರಕ ಉಪನ್ಯಾಸ ಸರಣಿ-2ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಡಿದರು.

ಏಪ್ರಿಲ್ 5ರಂದು ವಿಶ್ವಸಂಸ್ಥೆ ಘೋಷಿಸಿದಂತೆ ಅಂತಾರಾಷ್ಟ್ರೀಯ ಆತ್ಮಸಾಕ್ಷಿಯ ದಿನವಾಗಿ ಆಚರಿಸಲಾಗುತ್ತದೆ. ಕಾನೂನು ವೃತ್ತಿಯಲ್ಲಿ ಆತ್ಮಸಾಕ್ಷಿ ಮತ್ತು ನೈತಿಕತೆ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಮೂರು ವೃತ್ತಿಗಳನ್ನು ಉದಾತ್ತ ವೃತ್ತಿಗಳೆಂದು ಪರಿಗಣಿಸಲಾಗುತ್ತದೆ. ಮೊದಲನೆಯದಾಗಿ, ವೈದ್ಯಕೀಯ, ಕಾನೂನು ಮತ್ತು ಪಾದ್ರಿ ವೃತ್ತಿ, ಮತ್ತು ನಂತರ ಬೋಧನಾ ವೃತ್ತಿಯನ್ನು ನವೋದಯದ ಸಮಯದಲ್ಲಿ ಸೇರಿಸಲಾಯಿತು ಎಂದು ಗಮನ ಸೆಳೆದರು.

ಅಮೆರಿಕದಲ್ಲಿ ಕೇವಲ ಶೇ.12ರಷ್ಟು ವಕೀಲರು ಮಾತ್ರ ಪ್ರಾಮಾಣಿಕರು. ಕಾನೂನು ವೃತ್ತಿಯಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆ ಪ್ರಮುಖ ಪಾತ್ರ ವಹಿಸುತ್ತದೆ. ಮಾನವ ಮತ್ತು ಮಾನವನಾಗಿರುವ ನಡುವಿನ ಸೇತುವೆ ಎಂದರೆ ಶಿಕ್ಷಣ ಎಂದರು.

ಭಾರತದ ಸಂವಿಧಾನವು ನಿರ್ದಿಷ್ಟ ಪಡಿಸಿದ ಏಕೈಕ ವೃತ್ತಿ ಕಾನೂನು ವೃತ್ತಿಯಾಗಿದೆ. ಮಾನವ ಶ್ರೇಷ್ಠತೆ ಇಲ್ಲದೆ ಶೈಕ್ಷಣಿಕ ಶ್ರೇಷ್ಠತೆ ಒಂದು ವಿಪತ್ತು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ವೇಣುಗೋಪಾಲ್ ಮಾತನಾಡಿ, ಕಾನೂನು ಒಂದು ಸಾಮಾನ್ಯ ಜ್ಞಾನ ಮತ್ತು ನೈತಿಕತೆ ಕಾನೂನಿನಲ್ಲಿ ಮಾತ್ರವಲ್ಲ, ಜೀವನದ ಎಲ್ಲ ಘಟ್ಟದಲ್ಲಿ ಮುಖ್ಯವಾಗಿದೆ ಎಂದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾನೂನು ವೃತ್ತಿಯಲ್ಲಿ ನೈತಿಕ ಮಾನದಂಡಗಳು ಹೇಗೆ ಕಡಿಮೆಯಾಗುತ್ತಿವೆ. ವಿದ್ಯಾರ್ಥಿಗಳು ಯಾವಾಗಲೂ ನೈತಿಕ ಹಾದಿಯಲ್ಲಿ ನಡೆಯಬೇಕು ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಸತೀಶ್ ಗೌಡ, ಪ್ರಾಂಶುಪಾಲೆ ಡಾ.ಪಿ.ದೀಪು, ಪ್ರೊ.ಎಂ.ಜೆ.ಇಂದುಮತಿ, ಡಾ. ಶ್ರೀದೇವಿ ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net