ಕಾನೂನು ವಿವಿ ಘಟಿಕೋತ್ಸವ ನಡೆಸಿ

kslu abvp
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.

ಪರಿಷತ್ ಪದಾಧಿಕಾರಿಗಳು ವಿವಿ ಕುಲಸಚಿವೆ ಅನುರಾಧಾ ವಸ್ತ್ರದ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

2022ರ ನಂತರ ಕಾನೂನು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ನಡೆಸಿರುವುದಿಲ್ಲ. 2 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಘಟಿಕೋತ್ಸವದ ನಿರೀಕ್ಷೆಯಲ್ಲಿದ್ದಾರೆ. ಘಟಿಕೋತ್ಸವ ನಡೆಯದಿರುವ ಕಾರಣ ಹಲವಾರು ರೀತಿಯ ಸಮಸ್ಯೆಯನ್ನು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ. 2023 ಹಾಗೂ ನಂತರದಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೂ ಮುಂದಿನ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಹೊರಗುತ್ತಿಗೆ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದ ಕುರಿತು ತನಿಖಾ ಸಮಿತಿಯನ್ನು ವಿಶ್ವವಿದ್ಯಾಲಯವು ರಚಿಸಿತ್ತು. ಆದರೆ, ತನಿಖಾ ಸಮಿತಿಯು 6 ತಿಂಗಳು ಕಳೆದರೂ ವರದಿ ನೀಡದಿರುವುದು ಹಲವು ರೀತಿಯ ಸಂಶಯಗಳಿಗೆ ಅನುವು ಮಾಡಿ ಕೊಟ್ಟಿರುತ್ತದೆ. ತನಿಖಾ ಸಮಿತಿಯು ತಕ್ಷಣ ತನಿಖಾ ವರದಿಯನ್ನು ನೀಡದ್ದಿದ್ದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಲಿದೆ ಎಂದು ಮನವಿಯಲ್ಲಿ ತಿಳಿಸಿದೆ.

ಮನವಿ ಸಲ್ಲಿಸುವ ಸಂಧರ್ಭದಲ್ಲಿ ಮಣಿಕಂಠ ಕಳಸ, ವೆಂಕಟೇಶ ಲಮಾಣಿ, ಫಕೀರಪ್ಪ, ಸಿದ್ದಾರ್ಥ, ವಿಜಯ್ ಕಲ್ಲೂರ, ಶಿವು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net