

ಧಾರವಾಡ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಮಾ. 14ರಂದು ನಗರದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಜರುಗಲಿದೆ ಎಂದು ಕುಲಸಚಿವ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸುವರು. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪಾಲ್ಗೊಳ್ಳುವರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೋಹನ ಎಂ. ಶಾಂತನಗೌಡರ ಘಟಿಕೋತ್ಸವ ಭಾಷಣ ಮಾಡುವರು. ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಘಟಿಕೋತ್ಸವದಲ್ಲಿ 5,136 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಕಾನೂನು ವಿಶ್ವವಿದ್ಯಾಲಯ ಪ್ರಾಯೋಜಿಸಿದ 20 ಸುವರ್ಣ ಪದಕ ಮತ್ತು ಮುಂಬೈನ ನಾನೀ ಪಾಲ್ಕಿವಾಲಾ ಮೆಮೋರಿಯಲ್ ಟ್ರಸ್ಟ್ ಪ್ರಾಯೋಜಿಸಿದ 3 ಸುವರ್ಣ ಪದಕ, ಸೀತಾರಾಮ ಜಿಂದಾಲ್ ಫೌಂಡೇಷನ್ ಪ್ರಾಯೋಜಿಸಿದ 1 ಸುವರ್ಣ ಪದಕ ಮತ್ತು ಎಲ್.ಜಿ. ಹಾವನೂರ ಸ್ಮರಣಾರ್ಥ ಪ್ರಾಯೋಜಿಸಿದ 1 ಸುವರ್ಣ ಪದಕ ಪ್ರದಾನ ಮಾಡಲಾಗುವುದು. ಕನ್ನಡದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಪೊ›ೕತ್ಸಾಹಿಸಲು 3 ಹಾಗೂ 5 ವರ್ಷದ ಕಾನೂನು ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿ ಕೋರ್ಸ್ನ 10 ಅಭ್ಯರ್ಥಿಗಳಿಗೆ ರ್ಯಾಂಕ್ ಸರ್ಟಿಫಿಕೇಟ್ ನೀಡಲಾಗುವುದು ಎಂದು ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.
ಪದವಿಗಳ ವಿವರ: 1151 ವಿದ್ಯಾರ್ಥಿಗಳಿಗೆ 3 ವರ್ಷದ ಎಲ್ಎಲ್ಬಿ ಪದವಿ, 271 ಜನರಿಗೆ ಬಿ.ಎ. ಎಲ್ಎಲ್ಬಿ ಪದವಿ, 59 ಜನರಿಗೆ ಬಿ.ಬಿ.ಎ. ಎಲ್ಎಲ್ಬಿ ಪದವಿ, 41 ಜನರಿಗೆ ಬಿ.ಎ. ಎಲ್ಎಲ್ಬಿ (ಆನರ್ಸ್) ಪದವಿ, 55 ಜನರಿಗೆ ಬಿ.ಬಿ.ಎ. ಎಲ್ಎಲ್ಬಿ (ಆನರ್ಸ್) ಪದವಿ, 72 ಜನರಿಗೆ ಎಲ್ಎಲ್ಎಂ ಪದವಿ, 42 ಜನರಿಗೆ ಪಿ.ಜಿ. ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್, 6 ಜನರಿಗೆ ಪಿಎಚ್.ಡಿ ಸೇರಿ 5136 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.
ಉಸಿರಾಟ ತೊಂದರೆ, ಕೆಮ್ಮು ಇದ್ದವರಿಗೆ ನಿರ್ಬಂಧ: ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಗತ್ಯ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಘಟಿಕೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಆಹ್ವಾನಿತರಲ್ಲಿ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳಿದ್ದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಸೂಚಿಸಲಾಗಿದೆ. ಕರೊನಾ ವೈರಸ್ನ ರೋಗ ಲಕ್ಷಣಗಳುಳ್ಳ ವಿದ್ಯಾರ್ಥಿಗಳು ಹಾಗೂ ಆಹ್ವಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.