ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರಿ

25 krp-03
Published on

ಕೆ.ಆರ್.ಪೇಟೆ: ಅಧಿಕಾರ ದುರ್ಬಳಕೆ, ಹಣ ದುರುಪಯೋಗ, ಲಂಚಕ್ಕಾಗಿ ಬೇಡಿಕೆ ಮುಂತಾದ ಕಾನೂನು ಬಾಹಿರ ಕಾರ್ಯ ಚಟುವಟಿಕೆಗಳಿಂದ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ದೂರವಿರಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ದೂರುಗಳು ಬಂದರೆ ಲೋಕಾಯುಕ್ತ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ.ಸುನಿಲ್ ಕುಮಾರ್ ಎಚ್ಚರಿಸಿದರು.


ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ಘಟಕದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಸಾರ್ವಜನಿಕರ ಕುಂದುಕೊರತೆ, ದೂರುಗಳ ಸ್ವೀಕಾರ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.


ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪಿಸಬೇಕಾದ ಜವಾಬ್ದಾರಿ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲಿದೆ. ಆದರೆ ಕಂದಾಯ ಇಲಾಖೆ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಸರ್ವೇ ಇಲಾಖೆಗಳ ಮೇಲೆ ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ಸ್ವೀಕರಿಸಿ ವಿಲೇ ಮಾಡದ ಬಗ್ಗೆ ವ್ಯಾಪಕ ದೂರುಗಳಿವೆ. ಅಧಿಕಾರಿಗಳು ಸಾರ್ವಜನಿಕರ ಅರ್ಜಿಗಳನ್ನು ಕಡ್ಡಾಯವಾಗಿ ಸ್ವೀಕರಿಸಿ ಸಕಾಲದಲ್ಲಿ ಅವುಗಳನ್ನು ವಿಲೇ ಮಾಡಬೇಕು. ಅರ್ಜಿ ಸ್ವೀಕರಿಸಿದ ಬಗ್ಗೆ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಬೇಕು. ವಿಲೇ ಮಾಡಲಾಗದ ಅರ್ಜಿಗಳ ಬಗ್ಗೆ ಸೂಕ್ತ ಕಾರಣ ನೀಡಿ ಹಿಂಬರಹ ನೀಡಬೇಕು. ತಾಲೂಕಿನಲ್ಲಿ ಕೆಲವು ಕಡೆ ಅರ್ಜಿ ಸ್ವೀಕರಿಸಿ ವರ್ಷ ಕಳೆದರೂ ಪಿಡಿಒಗಳು ಅರ್ಜಿದಾರರ ಅರ್ಜಿ ವಿಲೇ ಮಾಡುವುದಿರಲಿ ಅರ್ಜಿ ಸ್ವೀಕಾರದ ಸ್ವೀಕೃತಿ ಪತ್ರಗಳನ್ನು ನೀಡದಿರುವ ಬಗ್ಗೆ ಲೋಕಾಯುಕ್ತಕ್ಕೆ ಸಾಕಷ್ಟು ದೂರುಗಳು ಬಂದಿವೆ. ಕಚೇರಿಗಳಿಗೆ ಸಾರ್ವಜನಿಕರ ಅನವಶ್ಯಕ ಅಲೆದಾಟವನ್ನು ನಿಲ್ಲಿಸಬೇಕು. ಅರ್ಜಿಗಳಿಗೆ ಸಕಾಲದಲ್ಲಿ ಮುಕ್ತಿ ನೀಡಬೇಕು. ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡುವಂತೆ ತಾಕೀತು ಮಾಡಿದರು.


ಆರ್.ಟಿ.ಐ ಮೂಲಕ ಅರ್ಜಿ ಹಾಕಿ ದಾಖಲೆಗಳನ್ನು ಕೇಳಿದರೆ ಅದನ್ನು ಅಧಿಕಾರಿಗಳು ಸಕಾಲದಲ್ಲಿ ನೀಡುತ್ತಿಲ್ಲ. ದಾಖಲೆಗಳಿಗಾಗಿ ಅರ್ಜಿ ಹಾಕಿದರೆ ಪೊಲೀಸರ ಮೂಲಕ ಅರ್ಜಿದಾರರನ್ನು ಬೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಜಯಣ್ಣ ಮತ್ತು ನಾಗೇಗೌಡ ಎಂಬುವರು ದೂರಿದರು. ಅಲ್ಲದೆ ತಾಲೂಕಿನ ಕಿಕ್ಕೇರಿಯ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ನಿವಾಸ್ ಎನ್ನುವವರು ಸುಳ್ಳು ಮಾಹಿತಿ ನೀಡಿ ಲೋಕಸೇವಾ ಆಯೋಗದ ಮೂಲಕ ಸರ್ಕಾರಿ ಹುದ್ದೆ ಪಡೆದಿದ್ದಾರೆ. ಇದರ ಬಗ್ಗೆ ದಾಖಲೆಗಳ ಸಮೇತ ದೂರು ನೀಡಿದ್ದರೂ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಲ್ಲ. ಈ ಬಗ್ಗೆ ನೇಮಕಾತಿ ಪ್ರಾಧಿಕಾರ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಲಿಖಿತ ದೂರು ನೀಡಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ತಕ್ಷಣವೇ ನಿವಾಸ್ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ದಾಖಲೆಗಳನ್ನು ಸಲ್ಲಿಸಿದರು.

ಜಿಲ್ಲಾ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಎಂ.ಆರ್.ಮೋಹನ್ ರೆಡ್ಡಿ, ಬಿ.ಪಿ.ಬ್ಯಾಟರಾಯಗೌಡ, ತಹಸೀಲ್ದಾರ್ ನಿಸರ್ಗಪ್ರಿಯ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net