ಕಾನೂನು ಪ್ರಾಧಿಕಾರದ ಲಾಭ ಪಡೆಯಿರಿ

10Manju1
ಬೆಳಗಾವಿ ನಗರದ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಗುರುವಾರ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಜಿಲ್ಲಾ ನ್ಯಾಯಾಧೀಶ ಎ.ಬಿ.ಶ್ರೀನಾಥ, ಮಂಜುನಾಥ ಭಟ್ ಭೇಟಿ ನೀಡಿ ಪರಿಶೀಲಿಸಿದರು.
Published on

ಬೆಳಗಾವಿ: ಕಾನೂನು ಸಲಹೆ ನೀಡಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಿದ್ಧವಿದೆ. ಯಾವುದೇ ರೀತಿಯ ಕಾನೂನು ಸಹಾಯ ಬೇಕಿದ್ದರೆ ಪ್ರಾಧಿಕಾರ ಉಚಿತ ಸೇವೆ ನೀಡುತ್ತದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ಹೇಳಿದರು.

ನಗರದ ಹಿಂಡಲಗಾ ಕೇಂದ್ರ ಕಾರಾಗೃಹ ಮತ್ತು ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿ ವ್ಯವಸ್ಥೆ ಹಾಗೂ ಸೇವೆಗಳ ಪರಿಶೀಲನೆ ನಡೆಸಿ ನಂತರ ಕಾರಾಗೃಹದ ಕೈದಿಗಳೊಂದಿಗೆ ಸಂವಾದ ನಡೆಸಿದ ಅವರು ಮಾತನಾಡಿದರು. ಸ್ಥಳೀಯ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೂ ಕಾನೂನು ಹೋರಾಟ ನಡೆಸಲು ವಕೀಲರನ್ನೂ ನೇಮಕ ಮಾಡಿಕೊಡುತ್ತದೆ. ಇಂತಹ ಸೇವೆ ಬಳಸಿಕೊಂಡು ಬದುಕು ಬದಲಾಯಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಜಿಲ್ಲಾ ನ್ಯಾಯಾಧೀಶ ಎ.ಬಿ.ಶ್ರೀನಾಥ, ಮಂಜುನಾಥ ಭಟ್ ಅವರು ಕಾರಾಗೃಹದ ಊಟದ ಕೊಠಡಿ, ಕೈದಿಗಳಿರುವ ಕೊಠಡಿ ಸೇರಿದಂತೆ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿ ಆಹಾರ ಪದಾರ್ಥಗಳನ್ನು ಅಸುರಕ್ಷತೆಯಲ್ಲಿ ಸಂಗ್ರಹಿಸಿಟ್ಟಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಕಾರಾಗೃಹ ಅಧೀಕ್ಷಕ ಕೃಷ್ಣಕುಮಾರ ಮಾತನಾಡಿ, ಶತಮಾನ ಕಂಡ ಕಾರಾಗೃಹದ ಕಟ್ಟಡ ನವೀಕರಣಕ್ಕೆ ಅನುದಾನ ಮಂಜೂರಾಗಿದ್ದು ಶೀಘ್ರ ಕೊಠಡಿ ನವೀಕರಣ ಕಾಮಗಾರಿ ಕೈಗೊಂಡು ಸುರಕ್ಷತೆಗೆ ಒತ್ತು ನೀಡುವುದಾಗಿ ತಿಳಿಸಿದರು.

ಜಿಲ್ಲಾಸ್ಪತ್ರೆಗೆ ಸೌಲಭ್ಯ ಕಲ್ಪಿಸಲು ಸೂಚನೆ

ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಜಿಲ್ಲಾ ನ್ಯಾಯಾಧೀಶ ಎ.ಬಿ.ಶ್ರೀನಾಥ, ಮಂಜುನಾಥ ಭಟ್ ಅವರು ಗುರುವಾರ ನಗರದ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾ ಇಎಸ್‌ಐ ಆಸ್ಪತ್ರೆಗೂ ಭೇಟಿ ಪರಿಶೀಲನೆ ನಡೆಸಿದರು. ಅಲ್ಲದೇ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಜತೆಗೆ ಬಂದಿರುವ ಪಾಲಕ- ಪೋಷಕರು, ಸಂಬಂಧಿಕರಿಗೆ ಅಗತ್ಯ ಸೌಲಭ್ಯವಿಲ್ಲ ದಿರುವುದನ್ನು ಕಂಡು ಅಸಮಾಧಾನ ವ್ಯಕ್ತ ಪಡಿಸಿದರು.
ಜಿಲ್ಲಾಸ್ಪತ್ರೆಯ ಕೊಠಡಿಗಳನ್ನು ಬಳಸಿಕೊಂಡಿರುವ ರೆಡ್‌ಕ್ರಾಸ್ ಸಂಸ್ಥೆ ಕಚೇರಿಗಳನ್ನು ಸ್ಥಳಾಂತರಿಸಿದರೆ ತಕ್ಷಣ ಸೂರು ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ಎ.ಬಿ.ಪಾಟೀಲ ಮನವಿ ಮಾಡಿದರು.

ಸಾರ್ವಜನಿಕ ಸೇವೆಗಳಲ್ಲಿರುವ ನ್ಯೂನತೆಗಳನ್ನು ಒಂದು ತಿಂಗಳೊಳಗಾಗಿ ಸರಿಪಡಿಸಿಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಒಂದು ತಿಂಗಳ ನಂತರ ಮತ್ತೆ ಭೇಟಿ ನೀಡಿ, ಪರಿಶೀಲಿಸಲಾಗುವುದು.| ಬಿ.ವೀರಪ್ಪ ಅಧ್ಯಕ್ಷ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net