

ವಿಜಯವಾಣಿ ಸುದ್ದಿಜಾಲ ಧಾರವಾಡ
ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬಡ ಜನರಿಗೆ ಕಾನೂನು ಬಾಹೀರವಾಗಿ ಹಕ್ಕುಪತ್ರ ವಿತರಿಸಿದ್ದನ್ನು ಖಂಡಿಸಿ ನಗರದ ಸ್ಲಂ ಬೋರ್ಡ್ ಕಚೇರಿ ಎದುರು ಮಂಗಳವಾರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕ್ಷೇತ್ರ ವ್ಯಾಪ್ತಿಯ ಮೆಹಬೂಬ ನಗರ ಹಾಗೂ ಇತರ ವಾರ್ಡ್‌ಗಳಲ್ಲಿನ ಬಡವರಿಗೆ ಶಾಸಕ ಪ್ರಸಾದ ಅಬ್ಬಯ್ಯ ಕಾನೂನು ಬಾಹೀರವಾಗಿ ಹಕ್ಕುಪತ್ರ ವಿತರಿಸಿದ್ದಾರೆ. ಫಲಾನುಭವಿಗಳ ಮನೆಗೆ ತೆರಳಿ, ಇಲ್ಲವೇ ಒಂದೇ ಸ್ಥಳದಲ್ಲಿ ಎಲ್ಲರನ್ನೂ ಕರೆದು ಅಧಿಕಾರಿಗಳ ಸಮ್ಮುಖದಲ್ಲಿ ಪತ್ರ ವಿತರಿಸಬೇಕಿತ್ತು. ಆದರೆ ಶಾಸಕರು ಶಿಷ್ಟಾಚಾರ ಉಲ್ಲಂಘಿಸಿ ತಮ್ಮ ಮನೆಯಲ್ಲೇ ವಿತರಿಸಿದ್ದಾರೆ ಎಂದು ದೂರಿದರು.
ಶಾಸಕರು ತಮ್ಮ ಅಧಿಕಾರ ಮತ್ತು ಅಧಿಕಾರಿಗಳನ್ನು ದರುಪಯೋಗಪಡಿಸಿಕೊಂಡು ದರ್ಪ ಮೆರೆದಿದ್ದಾರೆ. ಹಕ್ಕುಪತ್ರ ವಿತರಣೆ ಸಮಯದಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಹಕ್ಕುಪತ್ರಗಳನ್ನು ಕೊಡಿಸುವಲ್ಲಿ ಶ್ರಮಿಸಿದ ಪಾಲಿಕೆ ಸದಸ್ಯರು ಸೇರಿ ಇತರರಿಗೂ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಪತ್ರ ವಿತರಿಸಿದ್ದಾರೆ ಎಂದು ಆರೋಪಿಸಿದರು.
ಕೆಲ ಹೊತ್ತು ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಕಾನೂನು ಚೌಕಟ್ಟಿನಲ್ಲಿ ಹಕ್ಕುಪತ್ರಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿ ವಸತಿ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿಪತ್ರ ರವಾನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದ ಮಠ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಮೋಹನ ರಾಮದುರ್ಗ, ಮುಖಂಡರಾದ ಚಂದ್ರಶೇಖರ ಗೋಕಾಕ, ಡಾ. ಕ್ರಾಂತಿ ಕಿರಣ, ದುರ್ಗಮ್ಮ ಬಿಜವಾಡ, ಬಸವರಾಜ ಅಮ್ಮಿನಬಾವಿ, ಜಗದೀಶ ಬುಳ್ಳಾನವರ, ಸಂತೋಷ ಅರಕೇರಿ, ಪ್ರತಿಭಾ ಪವಾರ, ಅನುಪ ಬೀಜವಾಡ, ಅಣ್ಣಪ್ಪ ಗೋಕಾಕ, ಸಂಗಮ ಹಂಜಿ, ಶಿವಯ್ಯ ಹಿರೇಮಠ, ನಾಗರತ್ನ ಬಳ್ಳಾರಿ, ಪೂಜಾ ರಾಯ್ಕರ, ಲಕ್ಷ್ಮೀಕಾಂತ ಘೋಡಕೆ, ಇತರರು ಇದ್ದರು.