

ಎನ್.ಆರ್.ಪುರ: ಪಟ್ಟಣದ ಸುಂಕದಕಟ್ಟೆ ವಿದ್ಯಾ ಗಣಪತಿ ಸಮಿತಿ ಹಾಗೂ ಜಾಮಿಯಾ ಮಸೀದಿಯ ಈದ್ ಮಿಲಾದ್ ಕಮಿಟಿ ಕಾನೂನನ್ನು ಗೌರವಿಸಿ ಇತರರಿಗೆ ಮಾದರಿಯಾಗಿರುವುದನ್ನು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅವರನ್ನು ಸನ್ಮಾನಿಸಿ, ಅಭಿನಂದನೆ ಪತ್ರ ನೀಡಿದ್ದಾರೆ ಎಂದು ಪಿಎಸ್‌ಐ ಬಿ.ಎಸ್.ನಿರಂಜನಗೌಡ ತಿಳಿಸಿದರು.
ಮಂಗಳವಾರ ಪೊಲೀಸ್ ಠಾಣೆಯಲ್ಲಿ ಸುಂಕದಕಟ್ಟೆ ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ನವೀನ್ ಮತ್ತು ಸದಸ್ಯರಿಗೆ ಹಾಗೂ ಜಾಮಿಯಾ ಮಸೀದಿಯ ಈದ್ ಮಿಲಾದ್ ಕಮಿಟಿ ಅಧ್ಯಕ್ಷ ನಾಸೀರ್ ಖಾನ್ ಹಾಗೂ ಸದಸ್ಯರಿಗೆ ಎಸ್ಪಿ ಡಾ. ವಿಕ್ರಮ ಅಮಟೆ ನೀಡಿದ ಅಭಿನಂದನಾ ಪತ್ರ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಸಮಯದಲ್ಲಿ ಪೊಲೀಸ್ ಇಲಾಖೆ ನೀಡಿದ ಸೂಚನೆಯನ್ನು ಸರಿಯಾಗಿ ಅನುಸರಿಸಿ ಯಾವುದೇ ಕಾನೂನು ಉಲ್ಲಂಘನೆಯಾಗದಂತೆ ಹಬ್ಬವನ್ನು ಆಚರಿಸಿದ 9 ಸಮಿತಿಗಳಿಗೆ ಎಸ್ಪಿ ಡಾ. ವಿಕ್ರಮ ಅಮಟೆ ಅವರು ಪೊಲೀಸ್ ಇಲಾಖೆ ಹಾಗೂ ವೈಯಕ್ತಿಕವಾಗಿಯೂ ಸನ್ಮಾನಿಸಿ ಅಭಿನಂದಿಸಿದ್ದಾರೆ. ವಿಶೇಷವಾಗಿ ಜಿಲ್ಲೆಯ 9 ಸಮಿತಿಗಳ ಪೈಕಿ ಎನ್.ಆರ್.ಪುರ ಗಣಪತಿ ಸಮಿತಿ ಹಾಗೂ ಈದ್ ಮಿಲಾದ್ ಸಮಿತಿಗೆ ಅಭಿನಂದನಾ ಪತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಘ ಸಂಸ್ಥೆಗಳು ಕಾನೂನು ಗೌರವಿಸಿ ಶಾಂತಿ ಕಾಪಾಡಬೇಕು ಎಂಬ ಉದ್ದೇಶದಿಂದ ಎಸ್ಪಿ ಮೊದಲ ಬಾರಿಗೆ 9 ಸಮಿತಿಗಳನ್ನು ಗುರುತಿಸಿ ಸನ್ಮಾನ ಮಾಡಿ ಅಭಿನಂದನೆ ಪತ್ರ ನೀಡಿದ್ದಾರೆ ಎಂದು ತಿಳಿಸಿದರು.