

ಮೂಡಿಗೆರೆ: ಪೊಲೀಸ್ ಇಲಾಖೆಯಿಂದ ಪ.ಜಾತಿ, ಪ.ಪಂಗಡಗಳ ಕುಂದುಕೊರತೆ ಸಭೆಯನ್ನು ಕಾನೂನು ಅರಿವು ತಿಳಿವಳಿಕೆ ಮೂಡಿಸುವ ಸಲುವಾಗಿ ಆಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರೂ ಕಾನೂನು ಚೌಕಟ್ಟಿನಲ್ಲಿ ನಡೆದರೆ ಅಪರಾಧಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಎಸ್‌ಪಿ ಡಾ. ವಿಕ್ರಮ್ ಅಮಟೆ ಹೇಳಿದರು.
ತಾಪಂನಲ್ಲಿ ಗುರುವಾರ ನಡೆದ ಪ.ಜಾತಿ, ಪ.ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಬಾಲ್ಯವಿವಾಹ, ಮಾದಕ ವಸ್ತುಗಳ ಮಾರಾಟಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಹೆಚ್ಚಾಗಿ ತಿಳಿವಳಿಕೆ ಮೂಡಿಸಲಾಗುತ್ತಿದೆ. ಕಾಫಿ ತೋಟದ ಕೂಲಿಲೈನ್‌ಗಳಲ್ಲಿ ಮತ್ತು ಕಾಲನಿಗಳಲ್ಲಿ ವಾಸವಿರುವ ಕಾರ್ಮಿಕರನ್ನು ಗುರುತಿಸಿ ಅವರಿಗೆ ಹೆಚ್ಚಿನ ರೀತಿಯಲ್ಲಿ ಕಾನೂನಿನ ಅರಿವು ಮೂಡಿಸಲಾಗುತ್ತಿದೆ. ಇಂಥ ಕಾರ್ಯಕ್ಕೆ ಸಮುದಾಯಗಳ ಮುಖಂಡರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು. ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿದರೆ ಕ್ಷಣಮಾತ್ರದಲ್ಲಿ ಪೊಲೀಸರು ಸ್ಥಳಕ್ಕೆ ಹಾಜರಾಗುತ್ತಾರೆ. ಪ್ರತಿಯೊಬ್ಬರೂ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಸಾರ್ವಜನಿಕರಿಗೆ ಬಂದೂಕು ತರಬೇತಿ ವ್ಯವಸ್ಥೆ ಮಾಡಲಾಗುವುದು. ತರಬೇತಿ ಪಡೆಯಲು ಅರ್ಹರಾದವರ ಬಗ್ಗೆ ಸಮುದಾಯದವರು ಪಟ್ಟಿ ಮಾಡಿ ಕಳಿಸಿಕೊಡಿ ಎಂದು ಮನವಿ ಮಾಡಿದರು.
ನಿವೇಶನ, ರುದ್ರಭೂಮಿ, ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತದೆ. ಅದನ್ನು ತಡೆಗಟ್ಟುವಂತೆ ಸಭೆಯಲ್ಲಿ ಮುಖಂಡರು ಪೊಲೀಸ್ ಅಧಿಕಾರಿಗಳ ಗಮನ ಸೆಳೆದರು. ಮಾಕೋನಹಳ್ಳಿ ಗ್ರಾಪಂ ವ್ಯಾಪ್ತಿಯ ನಾಗಲಾಪುರದಲ್ಲಿ 40 ಕುಟುಂಬಗಳು ವಾಸಿಸುತ್ತಿವೆ. ಆ ಬಡಾವಣೆ ನಿವಾಸಿಗಳಿಗೆ ಸ್ಮಶಾನ ಜಾಗವಿಲ್ಲದೆ ಚಿಕ್ಕ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬೇಕಾಗಿದೆ. ಚಿಕ್ಕ ಸ್ಮಶಾನ ಜಾಗಕ್ಕೆ ಹೋಗಲು ರಸ್ತೆ ಇಲ್ಲ. ಹಂಡುಗುಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ 2 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ಖುಲ್ಲಾಗೊಳಿಸಬೇಕು ದಲಿತ ಮುಖಂಡರು ಒತ್ತಾಯಿಸಿದರು.
ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಡಿವೈಎಸ್ಪಿ ಶೈಲೇಂದ್ರ, ತಹಸೀಲ್ದಾರ್ ಅಶ್ವಿನಿ, ಸಮಾಜ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್, ಪಿಡಬ್ಲುೃಡಿ ಎಇಇ ಚನ್ನಕೇಶವ, ಸಿಪಿಐ ರಾಜಶೇಖರ್, ಪಿಎಸ್‌ಐಗಳಾದ ಶ್ರೀನಾಥ್ ರೆಡ್ಡಿ, ದಿಲೀಪ್, ರಾಜ್ಯ ಲ್ಯಾಂಪ್ಸ್ ಮಹಾಮಂಡಳ ಮಾಜಿ ಅಧ್ಯಕ್ಷ ಮುತ್ತಪ್ಪ, ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್, ಬಿ.ಎಂ.ಶಂಕರ್, ಸಬ್ಲಿ ದೇವರಾಜ್, ಹೊನ್ನೇಶ್ ಇತರರಿದ್ದರು.
ಹಳೇಮೂಡಿಗೆರೆ ಗ್ರಾಮದ ನಿವೇಶನ ರಹಿತ ಕುಟುಂಬದವರು ಹಲವಾರು ವರ್ಷದಿಂದ ನಿವೇಶನಕ್ಕಾಗಿ ಹೋರಾಟ ಮಾಡಿದ ಬಳಿಕ ಗ್ರಾಪಂನಿಂದ ನಿವೇಶನ ಜಾಗ ಗುರುತಿಸಲಾಗಿದೆ. ಆ ಜಾಗಕ್ಕೆ ಹೋಗಲು ರಸ್ತೆಯಿಲ್ಲದೆ ನಿವೇಶನ ಹಂಚಿಕೆ ಮಾಡಿಲ್ಲ. ಹಳೇಮೂಡಿಗೆರೆ ಗ್ರಾಮದಲ್ಲಿ ಚರ್ಚ್ ನಿರ್ಮಿಸಿಕೊಂಡಿದ್ದಾರೆ. ಅಲ್ಲಿಗೆ ಪ್ರಾರ್ಥನೆ ಮಾಡಲು ಹೋಗುವವರನ್ನು ಹಿಂದು ಸಂಘಟನೆ ಕಾರ್ಯಕರ್ತರು ತಡೆಯುವ ಪ್ರಯತ್ನ ಮಾಡುತ್ತಾರೆ. ಹ್ಯಾಂಡ್‌ಪೋಸ್ಟ್ ಪಟ್ಟಣದ ಸಮೀಪದಲ್ಲಿರುವ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಿರಂತರವಾಗಿ ನಡೆಯುತ್ತಿದೆ ಎಂದು ಸಿಪಿಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾಹಿತಿ ನೀಡಿದರು.
ತಾಲೂಕಿನಲ್ಲಿ ಸರ್ಕಾರಿ ಶಾಲೆ ಆವರಣದಲ್ಲಿ ಪ್ರತಿ ವರ್ಷ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಈ ಬಾರಿ ಸರ್ಕಾರಿ ಶಾಲೆ ಆವರಣದಲ್ಲಿ ಗಣಪತಿಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಬಾರದು. ದಲಿತ ದೌರ್ಜನ್ಯ ಕಾಯ್ದೆಯಂತೆ ದೂರು ನೀಡಲು ಠಾಣೆಗೆ ಬಂದರೆ ಆ ದೂರಿನಲ್ಲಿ ಸತ್ಯಾಸತ್ಯತೆ ಇದ್ದರೆ ಮಾತ್ರ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು. ಸುಳ್ಳು ಪ್ರಕರಣ ದಾಖಲಿಸುವುದು ಸರಿಯಲ್ಲ. ಜಿಲ್ಲಾ ಮಟ್ಟದ ದಲಿತ ದೌರ್ಜನ್ಯ ಸಮಿತಿಗೆ ಮೂಡಿಗೆರೆ ತಾಲೂಕಿನ ನಿವೃತ್ತ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಅವರಿಗೆ ಬಡವರ ಬಗ್ಗೆ ಹೆಚ್ಚು ಕಾಳಜಿ ಮತ್ತು ತಿಳಿವಳಿಕೆ ಕಡಿಮೆಯಿರುವುದರಿಂದ ಅವರನ್ನು ಕೈಬಿಟ್ಟು ಸೂಕ್ತ ಸದಸ್ಯರನ್ನು ಆಯ್ಕೆ ಮಾಡಿದರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಿದ್ದಾರೆ. ಇದರಿಂದ ಪ.ಜಾತಿ ಮತ್ತು ಪಂಗಡದವರ ಧ್ವನಿ ಜಿಲ್ಲಾ ಮಟ್ಟಕ್ಕೆ ತಲುಪಲಿದೆ ಎಂದು ಬಿಎಸ್ಪಿ ಕ್ಷೇತ್ರಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್ ತಿಳಿಸಿದರು.
ಚರ್ಚ್ ಇತರ ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ಮಾಡಲು ಅಡ್ಡಿಪಡಿಸಿದರೆ ಪೊಲೀಸ್ ಇಲಾಖೆಯ ತುರ್ತುಸಂಖ್ಯೆಗೆ ಕರೆಮಾಡಿ ತಿಳಿಸಿದರೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಆದರೆ ಪ್ರಾರ್ಥನಾ ಮಂದಿರಗಳು ಅನುಮತಿ ಪಡೆದಿರಬೇಕು. ಅನುಮತಿ ಪಡೆಯದೆ ಬೇಕಾಬಿಟ್ಟಿಯಾಗಿ ಯಾರನ್ನೀ ಸೇರಿಸಿಕೊಂಡು ಪ್ರಾರ್ಥನೆ ಮಾಡಿದಾಗ ಕಾನೂನಾತ್ಮಕವಾಗಿ ತಪ್ಪಾಗುತ್ತದೆ. ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಮಶಾನ ಭೂಮಿಗೆ ಹೋಗಲು ರಸ್ತೆ ಸಮಸ್ಯೆ, ಭೂಮಿ ಒತ್ತುವರಿಯ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಪೊಲೀಸ್ ಇಲಾಖೆಯಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಲಾಗುವುದು ಎಂದು ಎಸ್‌ಪಿ ಡಾ. ವಿಕ್ರಮ್ ಅಮಟೆ ತಿಳಿಸಿದರು.