ಕಾನೂನು ಕೈಗೆ ತೆಗೆದುಕೊಂಡರೆ ಕ್ರಮ ನಿಶ್ಚಿತ

16kmr2
 ಕಮಲನಗರದ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿದರು. ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ ಇತರರಿದ್ದರು.
Published on

ಕಮಲನಗರ: ಗೋಹತ್ಯೆ ಘಟನೆ ಮುಂದಿಟ್ಟುಕೊಂಡು ಕಾನೂನು ಕೈಗೆ ತೆಗೆದುಕೊಂಡು, ಅನಗತ್ಯವಾಗಿ ಭಯ ಹುಟ್ಟಿಸುವ ಯಾವುದೇ ವ್ಯಕ್ತಿ ಮತ್ತು ಸಮಾಜಕ್ಕೆ ಕಾನೂನು ಆಸ್ಪದ ನೀಡುವುದಿಲ್ಲ. ಅಂಥವರ ವಿರುದ್ಧ ಕಾನೂನು ಕ್ರಮ ನಿಶ್ಚಿತ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಡೆದರೆ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಲಿದೆ. ಸಣ್ಣ ಘಟನೆಗೆ ದೊಡ್ಡದು ಮಾಡಿ, ರಸ್ತೆಯಲ್ಲಿ ಟೈರ್ ಸುಟ್ಟು ಜನರಲ್ಲಿ ಭಯ ಹುಟ್ಟಿಸುವುದು ಕಾನೂನಾತ್ಮಕ ಅಪರಾಧವಾಗಿದೆ ಎಂದರು.

ಜಿಲ್ಲಾ ಎಸ್‌ಪಿ ಪ್ರದೀಪ ಗುಂಟಿ ಮಾತನಾಡಿ, ಗೋಹತ್ಯೆ ಕೈಗೊಂಡ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ಗೋವಿನ ಶವವನ್ನು ಸಾರ್ವಜನಿಕ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿದ್ದು ಕಾನೂನಿನ ವಿರುದ್ಧವಾಗಿದೆ. ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತಾಪA ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ ಮಾತನಾಡಿ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ಘಟನೆ ನಡೆದಿರುವುದು ವ್ಯವಸ್ಥೆ ವೈಫಲ್ಯತೆಗೆ ಕಾರಣವಾಗಿದೆ. ಈ ರೀತಿಯ ಘಟನೆ ಜನರಲ್ಲಿ ವೈಮನಸ್ಸು ಮೂಡಲು ಕಾರಣವಾಗುತ್ತದೆ. ಭವಿಷ್ಯದಲ್ಲಿ ಹೀಗಾಗದಂತೆ ತಡೆಯಲು ಆಡಳಿತ ವರ್ಗ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡ ಅಜರ್ ಬಾಗವಾನ್ ಮಾತನಾಡಿ, ಹಿಂದು ಮುಸ್ಲಿಮರು ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಬಾಳುತ್ತಿದ್ದೇವೆ. ನಾವೆಲ್ಲರೂ ಈ ನೆಲದ ಕಾನೂನು ಗೌರವಿಸಿ ನೆಮ್ಮದಿಯಿಂದ ಬದುಕಬೇಕು ಎಂದರು.

ಬಸವರಾಜ ಪಾಟೀಲ್, ಪ್ರವೀಣ ಕದಮ, ಪಂಡಿತ ಪಾಟೀಲ್, ಬಾಲಾಜಿ ತೆಲಂಗ್, ಶೇರು ಬಾಗವಾನ ಮಾತನಾಡಿದರು. ಜಿಪಂ ಸಿಇಒ ಡಾ.ಗಿರೀಶ ಬದೋಲೆ, ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net