ಕಾನೂನು ಕಾಲೇಜು ಪ್ರಾರಂಭಕ್ಕೆ 13.5 ಲಕ್ಷ ರೂ, ಅನುದಾನ

Published on

ಚಾಮರಾಜನಗರ: ಈ ಸಾಲಿನ್ಲಲೇ ಪ್ರಾರಂಭವಾಗಲಿರುವ ಕಾನೂನು ಕಾಲೇಜಿಗೆ ಎಂಎಸ್‌ಐಎಲ್‌ನಿಂದ ಸುಮಾರು 13.5 ಲಕ್ಷ ರೂ, ಅನುದಾನವನ್ನು ನೀಡಲಾಗಿದ್ದು, ಅಗತ್ಯ ಮೂಲಸೌಕರ್ಯವನ್ನು ಒದಗಿಸಲಾಗಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪಟ್ಟರಂಗಶೆಟ್ಟಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2017-18 ನೇ ಸಾಲಿನಲ್ಲಿ ಕಾನೂನು ಕಾಲೇಜು ಮಂಜೂರಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ 1 ಕೋಟಿ ರೂ, ಅನುದಾನ ನೀಡಿತ್ತು. ಕಾಲೇಜು ಪ್ರಾರಂಭವಾಗದೇ ವಾಪಸ್ ಆಗಿತ್ತು. ಪ್ರಸ್ತುತ ಎಂಎಸ್‌ಐಎಲ್ ನಿಗಮದಿಂದ ಸುಮಾರು 13.5 ಲಕ್ಷ ರೂ, ಅನುದಾನವನ್ನು ನೀಡಿ, ಕಾಲೇಜಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಿದ ಪರಿಣಾಮವಾಗಿ ಭಾರತೀಯ ವಕೀಲರ ಪರಿಷತ್ ಕಾಲೇಜು ಪ್ರಾರಂಭಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಾನೂನು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತ ಯಡಪುರದ ಸರ್ವೇ ನಂ.112 ರಲ್ಲಿ 4 ಎಕರೆ ಜಾಗವನ್ನು ಮಂಜೂರು ಮಾಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಹಾಗೂ ನನ್ನ ಹೋರಾಟದ ಲವಾಗಿ ಈ ಹಿಂದೆ ಕೇಂದ್ರಿಯ ವಿದ್ಯಾಲಯದ ತರಗತಿಗಳು ನಡೆಯುತ್ತಿದ್ದ, ಹಳೆಯ ರೇಷ್ಮೆ ಮಾರುಕಟ್ಟೆ ಕಟ್ಟಡದಲ್ಲಿ ಕಾಲೇಜು ಪ್ರಾರಂಭಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೇ ಭಾರತೀಯ ವಕೀಲರ ಪರಿಷತ್ ಹಲವಾರು ಕಾರಣಗಳನ್ನು ನೀಡಿ ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಿರಲಿಲ್ಲ. ಇತ್ತೀಚೆಗೆ ನಾನು ಕಾನೂನು ಸಚಿವರು, ಕರ್ನಾಟಕ ವಕೀಲರ ಪರಿಷತ್‌ಗೆ ಪತ್ರವನ್ನು ಬರೆದು ಮನವಿ ಮಾಡಿಕೊಂಡಿದ್ದು, ಇದೇ ಸಾಲಿನಲ್ಲೇ ಕಾಲೇಜು ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲೇ ಕಾಲೇಜು ಮಂಜೂರಾಗಿದ್ದು, ಅವರ ಅವಧಿಯಲ್ಲೇ ಪ್ರಾರಂಭವಾಗುತ್ತಿದೆ. ಮಾಜಿ ಸಂಸದ ಧ್ರುವನಾರಾಯಣ್, ಕಾನೂನು ಸಚಿವರಾದ ಎಚ್.ಕೆ.ಪಾಟೀಲ್, ಸಂಸದ ಸುನೀಲ್ ಬೋಸ್ ಹಾಗೂ ಇನ್ನಿತರರು ಕಾಲೇಜು ಪ್ರಾರಂಭವಾಗಲು ಶ್ರಮಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ (ಮುನ್ನಾ), ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನಲ್ಲೂರು ಸೋಮೇಶ್ವರ್, ಮುಖಂಡರಾದ ಬಿ.ಕೆ.ರವಿಕುಮಾರ್, ಎಸ್‌ಪಿಕೆ ಉಮೇಶ್, ಸ್ವಾಮಿ ಹಾಜರಿದ್ದರು.

ಆಗಸ್ಟ್‌ನಿಂದ ಪ್ರವೇಶಾತಿ ಪ್ರಾರಂಭ:

ಚಾಮರಾಜನಗರದಲ್ಲಿ ಈ ಸಾಲಿನಿಂದಲೇ ಪ್ರಾರಂಭವಾಗಿರುವ ಕಾನೂನು ಕಾಲೇಜಿಗೆ ಆಗಸ್ಟ್‌ನಿಂದ ದಾಖಲಾತಿ ಪ್ರಾರಂಭವಾಗಲಿದೆ ಎಂದು ಕನೂನು ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್.ಲಲಿತಾ ಭಾಯಿ ತಿಳಿಸಿದರು. 3 ವರ್ಷದ ಕೋರ್ಸ್ ಪ್ರಾರಂಭವಾಗಲಿದ್ದು, ಯಾವುದೇ ವಿಷಯದಲ್ಲಿ ಪದವಿ ಪಡೆಯಬಹುದಾದ 60 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಅಗತ್ಯವಾದ ಪ್ರಾಧ್ಯಪಕರನ್ನು ಸರ್ಕಾರ ನೇಮಕ ಮಾಡಿದ್ದು, ಯಾವುದೇ ಸಮಸ್ಯೆ ಇಲ್ಲದೇ ಕಾಲೇಜು ಪ್ರಾರಂಭ ಮಾಡಬಹುದಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಕಾನೂನು ಕಾಲೇಜು ಪ್ರಾರಂಭವಾಗುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರಾದ ಸಿ.ಪಟ್ಟರಂಗಶೆಟ್ಟಿ ಅಗತ್ಯ ಸಹಕಾರವನ್ನು ನೀಡಿದ್ದಾರೆ. ಸಂಸದ ಸುನೀಲ್ ಬೋಸ್ ಅವರು ಕೂಡ ಬೆಂಬಲ ನೀಡಿದ್ದಾರೆ.

-ಕೆ.ಎಸ್.ಲಲಿತಾ ಭಾಯಿ, ಪ್ರಾಂಶುಪಾಲೆ, ಕಾನೂನು ಕಾಲೇಜು, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net