ಕಾನೂನು ಎಲ್ಲರಿಗೂ ಒಂದಾದರೆ ರಾಷ್ಟ್ರ ಸಮೃದ್ಧ

If the law is the same for all the nation will be prosperous
ಬಿಡಿಈ ಸಂಸ್ಥೆಯ ಸಭಾಭವನದಲ್ಲಿ ವಿಜಯಪುರ ಚಿಂತಕರ ಚಾವಡಿಯ ಆಗಸ್ಟ್ ತಿಂಗಳ ಮಥನ ಕಾರ್ಯಕ್ರಮದಲ್ಲಿ ನ್ಯಾಯವಾದಿ ಪೂಜಾ ಸವದತ್ತಿ ಉಪನ್ಯಾಸ ನೀಡಿದರು. ಡಾ. ಪ್ರಾಣೇಶ ಜಹಗೀರದಾರ, ಸ್ಮಿತಾ ಮೂರ್ತಿ, ಆನಂದ ಕುಲಕರ್ಣಿ, ಡಾ. ಮಹೇಶ ಬಾಗಲಕೋಟ, ರಘೂತ್ತಮ ಅರ್ಜುಣಗಿ ಇತರರಿದ್ದರು.
Published on

ವಿಜಯಪುರ: ಏಕರೂಪ ನಾಗರಿಕ ಸಂಹಿತೆ (ಏನಾಸಂ) 1840ರಲ್ಲಿ ಬ್ರಿಟಿಷರ ಮುಂದೆಯೂ ಇತ್ತು. ಸ್ವಾತಂತ್ರೃ ಸಿಕ್ಕ ಹೊಸ್ತಿಲಲ್ಲಿ ಸಂವಿಧಾನ ರಚನೆಕಾರರು ಈ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಬರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು ಎಂದು ಧಾರವಾಡ- ಬೆಂಗಳೂರಿನ ಉಚ್ಚ ನ್ಯಾಯಲಯ ಪೀಠಗಳಲ್ಲಿ ನ್ಯಾಯವಾದಿ ಪೂಜಾ ಸವದತ್ತಿ ಹೇಳಿದರು.

ನಗರದ ಬಿಡಿಈ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ನಡೆದ ವಿಜಯಪುರ ಚಿಂತಕರ ಚಾವಡಿಯ ಆಗಸ್ಟ್ ತಿಂಗಳ ಮಥನ ಕಾರ್ಯಕ್ರಮದ ಪ್ರಮುಖ ವಕ್ತಾರರಾಗಿ ಆಗಮಿಸಿ ಅವರು ಮಾತನಾಡಿ, ನಮ್ಮಲ್ಲಿ ನಾಗರಿಕ ಕಾನೂನು ಮತ್ತು ಅಪರಾಧ ಕಾನೂನು ಎರಡು ರೀತಿಯವು. ಅಪರಾಧ ಕಾನೂನು ಯಾವುದೇ ಜಾತಿ ಧರ್ಮಗಳಿಗೆ ಬೇರೆ ಬೇರೆ ಇಲ್ಲ. ಎಲ್ಲರೂ ಸಮನಾಗಿ ಅಪರಾಧಿಗಳು. ಆದರೆ ನಾಗರಿಕ ಕಾನೂನು ಬೇರೆ ಬೇರೆ ಇವೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯ ಈ ರಾಷ್ಟ್ರಕ್ಕೆ ಏನಾಸಂ ಬೇಕೆ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದರಿಂದ ಇದು ಈಗ ಸುದ್ದಿಯಲ್ಲಿದೆ ಎಂದು ವಿವರಿಸಿದರು.

ಈ ಸಂಹಿತೆ ಐದು ವಿಷಯಗಳಲ್ಲಿ ಮಾತ್ರ ಸಮಾನತೆಯನ್ನು ಅಪೇಕ್ಷಿಸುತ್ತಿದೆ. ಅವುಗಳೆಂದರೆ ವಿವಾಹ, ದತ್ತು ಸ್ವೀಕಾರ, ಜೀವನಾಂಶ, ಪಿತ್ರಾರ್ಜಿತ , ಉತ್ತರಾಧಿಕಾರ. ಈ ಐದು ವಿಷಯಗಳು ಎಲ್ಲ ಧರ್ಮ ಜಾತಿಯವರಿಗೂ ಸಮನಾದಾಗ ರಾಷ್ಟ್ರ ಸಮೃದ್ಧವಾಗಬಹುದು. ಮಹಿಳೆಯರು ಸಬಲರಾಗಬಹುದು. ಯಾರ ಧಾರ್ಮಿಕ ಸ್ವಾತಂತ್ರ್ಯಕ್ಕೂ, ನೌಕರಿಗೂ ಇದು ಕೇಡನ್ನು ಬಯಸದು. ಸಾಮಾಜಿಕವಾಗಿ ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಸಮಾನರನ್ನಾಗಿ ಮಾಡಲು ಘನ ಉದ್ದೇಶ ಹೊಂದಿದೆ ಎಂದು ಹೇಳಿದರು.

ನಂತರ ವೀಕ್ಷಕರ ಅನೇಕ ಸಂದೇಹಗಳಿಗೆ ಪೂರಕ ಉತ್ತರವನ್ನು ಪೂಜಾ ಸವದತ್ತಿಯವರು ನೀಡಿದರು.

ಡಾ. ಪ್ರಾಣೇಶ ಜಹಗೀರದಾರ, ಸ್ಮಿತಾ ಮೂರ್ತಿ, ಆನಂದ ಕುಲಕರ್ಣಿ, ಡಾ. ಮಹೇಶ ಬಾಗಲಕೋಟ, ಜಯಶ್ರೀ ಕನ್ನೂರ, ಸಂತೋಷ ಕಳ್ಳಿಗುಡ್ಡ, ಈರಣ್ಣ ಬಿರಾದಾರ, ಸುರೇಶ ಕುಲಕರ್ಣಿ, ವಿಜಯಲಕ್ಷ್ಮೀ ಕೆಂಗನಾಳ, ಅನೇಕ ಗಣ್ಯರು, ಸಜ್ಜನರು, ವೈದ್ಯರು, ಶಿಕ್ಷಕ ಬಂಧುಗಳು ಮತ್ತು ತಾಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಸಾಹಿತ್ಯದ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಆಯೋಜಿಸಲಾಗಿತ್ತು. ಶ್ರೀಧರ ಪಾರಶೆಟ್ಟಿ ವಂದೇ ಮಾತರಂ ಹಾಡಿದರು. ಮನೀಷಾ ಕುಲಕರ್ಣಿ ಗೀತ ಗಾಯನ ಪ್ರಸ್ತುತಪಡಿಸಿದರು. ರಘೂತ್ತಮ ಅರ್ಜುಣಗಿ ಸ್ವಾಗತಿಸಿದರು. ಬಸವರಾಜ ದಂಡವತೆ ನಿರೂಪಿಸಿದರು. ಪವನ ಶರ್ಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net