ಕಾನೂನು ಇಲಾಖೆಯಿಂದ ಮತಗಳ್ಳತನ ಪರಿಶೀಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Siddaramaiah
Published on

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಕುರಿತು ಕಾನೂನು ಇಲಾಖೆ ಪರಿಶೀಲನೆ ನಡೆಸಲಿದ್ದು, ಅದು ನೀಡುವ ಶಿಫಾರಸಿನ ಅನ್ವಯ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದು, ಬಿಬಿಎಂಪಿ ಚುನಾವಣೆಗೆ ಮೊದಲು ಪಕ್ಷ ಇದನ್ನು ಪರಿಶೀಲಿಸಲಿದೆ ಎಂದರು.

ಮತದಾರರ ಪಟ್ಟಿಯ ಸಂಬಂಧ ಚುನಾವಣಾ ಆಯೋಗಕ್ಕೆ ಸಂಪೂರ್ಣ ಅಧಿಕಾರವಿದೆ. ಆದಾಗ್ಯೂ, ಮತಗಳ್ಳತನ ಕುರಿತು ಪರಿಶೀಲನಾ ಕಾರ್ಯವನ್ನು ತ್ವರಿತವಾಗಿ ನಡೆಸಿ ವರದಿ ನೀಡಲು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಈಗ ಮತಗಳ ಸ್ಥಾನದ ಬಗ್ಗೆ ಪ್ರಸ್ತಾಪಿಸಿರುವುದು ಏಕೆ ಎಂದು ಬಿಜೆಪಿಯವರು ಆರೋಪಿಸುತ್ತಿರುವ ಕುರಿತು ಉತ್ತರ ನೀಡಿದ ಸಿಎಂ, ಬಿಜೆಪಿಯವರು ತಪ್ಪು ಮಾಡಿ ಸುಳ್ಳು ಹೇಳುತ್ತಿದ್ದಾರೆ. ನಾವು ಕಳೆದ ಲೋಕಸಭಾ ಚುನಾವಣೆಯಲ್ಲಿ 16 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಆಂತರಿಕ ಸಮೀಕ್ಷೆ ತಿಳಿಸಿತ್ತು.

ಆದರೆ ನಾವು ಗೆದ್ದದ್ದು 9 ಸ್ಥಾನಗಳನ್ನು ಮಾತ್ರ. ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ವಿಚಾರ ತಿಳಿಸಿದ್ದಾರೆ. ದಾಖಲಾತಿಗಳ ಬಗ್ಗೆಯೇ ಪ್ರಸ್ತಾಪ ಮಾಡಿದ್ದಾರೆ. ಈ ಎಲ್ಲ ಮಾಹಿತಿ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಬಳಿ ಲಭ್ಯವಿದೆ. ಒಂದು ಸಣ್ಣ ಕೊಠಡಿಯಲ್ಲಿ 80 ಜನ ವಾಸ ಮಾಡಲು ಸಾಧ್ಯವೇ? ನಾವು ಈ ಬಗ್ಗೆ ಅಧ್ಯಯನ ಮಾಡಿದ ನಂತರ ವಿಷಯ ತಿಳಿದಿದೆ ಎಂದರು.

ಚುನಾವಣಾ ಆಯೋಗದ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸಲು ಮತಗಳ್ಳತನದ ಬಗ್ಗೆ ನ್ಯಾಯಾಂಗ ಸ್ವಯಂ ಪ್ರೇರಿತವಾಗಿ ಮಧ್ಯಪ್ರವೇಶ ಮಾಡಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಚುನಾವಣೆಗಳಲ್ಲಿ, ಇವಿಎಂಗಳಲ್ಲಿ, ಮತದಾರರ ಪಟ್ಟಿಗಳಲ್ಲಿ ಕೈವಾಡ ನಡೆಯುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ನನ್ನ ಪ್ರಕಾರ ರಾಹುಲ್ ಗಾಂಧಿ ಅವರು ಮಾಧ್ಯಮಗಳಲ್ಲಿ ಪ್ರದರ್ಶನ ಮಾಡಿದ್ದು ನಿಜ ಎಂದರು.

ಈ ವಿಚಾರ ನನಗೆ ಹೊಸದು

‘ಸಿದ್ದರಾಮಯ್ಯ ಅವರು ಬದಾಮಿ ಕ್ಷೇತ್ರದಲ್ಲಿ 3 ಸಾವಿರ ಮತಗಳನ್ನು ಖರೀದಿ ಮಾಡಿ ಗೆದ್ದದ್ದು’ ಎಂಬ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಇಬ್ರಾಹಿಂ ನಮ್ಮ ಪಕ್ಷದವರಲ್ಲ. ನಾನು ನಾಮಪತ್ರ ಸಲ್ಲಿಸಲು ಹಾಗೂ ಪ್ರಚಾರಕ್ಕಾಗಿ ಬದಾಮಿಗೆ ಹೋಗಿದ್ದೆ. ಅದು ಬಿಟ್ಟರೆ ನನಗೆ ಏನೂ ಗೊತ್ತಿಲ್ಲ. ನಾನು 1600 ಮತಗಳಿಂದ ಗೆದ್ದಿದ್ದು. 3 ಸಾವಿರ ಮತ ಖರೀದಿ ವಿಚಾರ ನನಗೆ ಹೊಸದು, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಉಪ ಚುನಾವಣೆಯಲ್ಲಿ ಸತ್ತವರೆಲ್ಲಾ ಮತ ಹಾಕಿ ಗೆಲ್ಲಿಸಿದ್ದಾರೆ ಎಂದು ತಾವು ಈ ಹಿಂದೆ ಮಾಡಿದ್ದ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಸತ್ತವರು ಮತ ಹಾಕಿದ್ದರೆ ಅದಕ್ಕೆ ಯಾರು ಜವಾಬ್ದಾರರು? ಚುನಾವಣಾ ಆಯೋಗ ಇದಕ್ಕೆ ನೇರ ಹೊಣೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಪೀಟರ್ ವೀಕ್ಷಕರಾಗಿದ್ದರು, ಅದಕ್ಕೆ ಸಿದ್ದರಾಮಯ್ಯ ಗೆದ್ದರು ಎಂದು ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಅವರಿಲ್ಲದೇ ಹೋಗಿದ್ದರೆ ನನ್ನನ್ನು ಸೋಲಿಸುತ್ತಿದ್ದರು ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net