ಕಾನೂನು ಅರಿವು ಅವಶ್ಯಕ

14.10.2020 SDLP 01
Published on

ಶಿಡ್ಲಘಟ್ಟ : ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುವಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಸಹಕಾರಿಯಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಡಿ.ಆರ್.ಮಂಜುನಾಥ್ ತಿಳಿಸಿದರು.

ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಬುಧವಾರ ಆಯೋಜಿಸಿದ್ದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಮತ್ತು ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಹಿತದೃಷ್ಟಿಯಿಂದ ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರ ಪಾತ್ರ ಅವಶ್ಯವಿದೆ. ಈ ದಿಸೆಯಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಕಾನೂನು ಇಲಾಖೆಗೆ ಹಾಗೂ ಸಮಾಜಕ್ಕೆ ಕಾನೂನಿನ ಅರಿವು ಹಾಗೂ ಸಲಹೆ ಕೊಡುವಲ್ಲಿ ನೆರವಾಗುತ್ತಿದ್ದಾರೆ. ಕಾನೂನು ಸ್ವಯಂ ಸೇವಕರು ನಿತ್ಯದ ಕೆಲಸದ ಅವಧಿಯಲ್ಲಿ ಕಾನೂನಿನ ಬಗ್ಗೆ ತಿಳಿದು ಅರ್ಹ ವ್ಯಕ್ತಿಗಳಿಗೆ ಕಾನೂನಿನ ಸಲಹೆ ಕೊಡುವಲ್ಲಿ ಸಮಯ ಮೀಸಲಿಡಬೇಕಿದೆ ಎಂದು ಸಲಹೆ ನೀಡಿದರು.

ಹಿರಿಯ ವಕೀಲ ಎಂ.ಪಾಪಿರೆಡ್ಡಿ ಮಾತನಾಡಿ, ದೇಶದಲ್ಲಿ 22 ಸಾವಿರಕ್ಕಿಂತಲೂ ಹೆಚ್ಚಿನ ಕಾನೂನುಗಳಿವೆ. ಇವುಗಳನ್ನು ಅಲ್ಪ ಮಟ್ಟದಲ್ಲಿಯಾದರೂ ಪ್ರತಿಯೊಬ್ಬರೂ ಕಲಿಯುವುದು ಒಳಿತು, ಕೆಲವು ಸಂದರ್ಭಗಳಲ್ಲಿ ಕಾನೂನಿನ ಅರಿವಿಲ್ಲದೆ ಸಣ್ಣ ಪುಟ್ಟ ಗಲಾಟೆಗಳನ್ನು ದೊಡ್ಡದು ಮಾಡಿಕೊಂಡು ಪೊಲೀಸ್ ಬಳಿ ಹೋಗುವುದು ಸರಿಯಲ್ಲ. ಆದಷ್ಟು ರಾಜಿ ಸಂಧಾನ ಅಥವಾ ಕಾನೂನು ಸುವ್ಯವಸ್ಥೆಯನ್ನು ಅರಿತುಕೊಳ್ಳುವುದು ಉತ್ತಮ ಎಂದರು.

ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ನ್ಯಾಯಾಲಯದಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಕಾನೂನಿನ ಅರಿವಿಲ್ಲದೆ ಆಗುತ್ತಿದೆ. ಆದ್ದರಿಂದ ಕಾನೂನಿನ ಸಾಮಾನ್ಯ ಅರಿವು ಜನ ಸಾಮಾನ್ಯರಲ್ಲಿ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ಯಾರಾಲೀಗಲ್ ವಾಲಂಟಿಯರ್ಸ್‌ಗಳು ಸಹಕಾರಿಯಾಗಬೇಕು ಎಂದು ಹೇಳಿದರು. ಹಿರಿಯಶ್ರೇಣಿ ನ್ಯಾಯಾಧೀಶ ಎಚ್.ದೇವರಾಜ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಎ ಪಚ್ಚಾಪುರೆ, ಸಿವಿಲ್ ನ್ಯಾಯಾಧೀಶ ಡಿ.ರೋಹಿಣಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net