

ಹಾಸನ: ಕಾನೂನಿನ ಅರಿವು ಇದ್ದಾಗ ಅಪರಾಧ ಪ್ರಕರಣಗಳು ನಡೆಯದಂತೆ ತಡೆಯಬಹುದು ಎಂದು ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಚ್.ಎಸ್ .ವೇಂಕಟೇಶ್ ನಾಯ್ಡು ಹೇಳಿದರು.
ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಮಾರ್ಗದರ್ಶನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶ್ರದ್ಧೆಯಿಂದ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು. ತಪ್ಪು ದಾರಿಗೆ ಹೊಗಬಾರದು. ಯಾರಾದರು ಸಹ ಅಪರಾಧ ಮಾಡುವ, ಅಹಿತಕರ ಘಟನೆ ಎಸಗುವಂತಹ ಆಲೋಚನೆಗೆ ಹೋಗಬಾರದು. ಹಾಗೂ ದುಶ್ಚಟಗಳಿಂದ ದೂರವಿರಿ. ಸಿಗರೆಟ್ ಸೇದುವುದು, ಮದ್ಯಪಾನ ಮಾಡುವುದು, ಗುಟುಕ ಇನ್ನಿತರ ದುಶ್ಚಟಗಳಿಗೆ ಬಲಿಯಾಗಬಾರದು. ಉತ್ತಮ ನಡತೆಯನ್ನು ಕಲಿಯಬೇಕು ಎಂದು ಕಿವಿ ಮಾತು ಹೇಳಿದರು.
ನೀವು ಏನಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪ್ರಕರಣ ದಾಖಲಾದರೆ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಲಿದೆ. ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ನಿಮ್ಮ ಮಾಹಿತಿಯನ್ನು ಪೊಲೀಸ್ ಇಲಾಖೆಯಿಂದ ವರದಿ ಪಡೆಯುತ್ತಾರೆ. ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದರೆ ನಿಮಗೆ ಭವಿಷ್ಯದಲ್ಲಿ ಯಾವುದೇ ಕೆಲಸ ಸಿಗದಂತಾಗುತ್ತದೆ. ಅದ್ದರಿಂದ ವಿದ್ಯಾರ್ಥಿಗಳು ಕೆಟ್ಟ ಕೆಲಸಕ್ಕೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಾರದು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಜೆ. ಕೃಷ್ಣಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು-ಸಂಯಮದಿಂದ ಇರಬೇಕು ಪ್ರಾಧ್ಯಾಪಕರು ಪಾಠ ಮಾಡುವ ಕಡೆಗೆ ಗಮನ ನೀಡಬೇಕು. ತರಗತಿಯಲ್ಲಿ ವ್ಯಾಸಂಗದ ಕಡೆಗೆ ಗಮನ ನೀಡಬೇಕು. ಕ್ಲಾಸ್‌ಗಳಿಗೆ ಚಕ್ಕರ್ ಹೊಡೆಯಬಾರದು. ಯಾವುದೇ ತಪ್ಪು ದಾರಿಗೆ ಹೊಗಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಹಾಗೂ ಪ್ರಾಧ್ಯಾಪಕ ಡಾ. ರಾಜಣ್ಣ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ಡಾ. ಕಲಾವತಿ, ಪ್ರಾಧ್ಯಾಪಕ ಡಾ. ಮೋಹನ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಅಧೀಕ್ಷಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.