ಕಾನೂನು ಅರಿತರೆ ಜೀವನ ಉತ್ತಮ, ನ್ಯಾಯಾಧೀಶ ತ್ಯಾಗರಾಜ್ ಎನ್. ಇನವಳ್ಳಿ ಅಭಿಮತ

13dbp5
Published on

ದೊಡ್ಡಬಳ್ಳಾಪುರ: ಪ್ರತಿಯೊಬ್ಬರೂ ಕಾನೂನು ಅರಿವು ಪಡೆದರೆ ಕಾನೂನು ತೊಡಕುಗಳಿಗೆ ಸಿಲುಕದೆ ಉತ್ತಮ ಜೀವನ ನಡೆಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ತ್ಯಾಗರಾಜ್ ಎನ್. ಇನವಳ್ಳಿ ತಿಳಿಸಿದರು.

75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ತಾಲೂಕು ಕಾನೂನು ಸೇವೆಗಳ ಸಮಿತಿ, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ, ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ನಗರದ ಡಿ.ಕ್ರಾಸ್ ಬಳಿಯ ಬಾಬು ಜಗಜೀವನ ರಾಂ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾನೂನು ಕಾರ‌್ಯಾಗಾರ ಮತ್ತು 2021ನೇ ಸಾಲಿನ ಕಾನೂನು ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ದೇಶವನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲು, ಅಪರಾಧ ಮನೋಭಾವ ಹತ್ತಿಕ್ಕುವಲ್ಲಿ ದೇಶದ ಕಾನೂನು ಶಕ್ತಿಯುತವಾಗಿದೆ. ಹೀಗಾಗಿ ಕಾನೂನಿನ ಜ್ಞಾನವು ಜೀವನದಲ್ಲಿ ಎದುರಾಗಬಹುದಾದ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ ಎಂದರು.

ಕಾನೂನು ಅರಿವಿನಿಂದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೇಗೆ ನಡೆದುಕೊಳ್ಳಬೇಕು, ನಮ್ಮ ಹಕ್ಕುಗಳನ್ನು ಹೇಗೆ ಪಡೆದುಕೊಳ್ಳಬಹುದು, ನಾವು ಎಲ್ಲಿ ಮೋಸಹೋಗುತ್ತಿದ್ದೇವೆ ಎಂದು ತಿಳಿದುಕೊಳ್ಳುವ ಮೂಲಕ ಸಮಾಜದಲ್ಲಿ ಸುರಕ್ಷಿತವಾದ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕಾನೂನು ಅರಿವು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್ ಮಾತನಾಡಿ, ದೇಶದ ಸಮಗ್ರ ಸಂವಿಧಾನ ಎಲ್ಲ ವರ್ಗಕ್ಕೂ ಸಮಾನವಾದ ಬದುಕು ನೀಡಿದೆ. ವಂಚನೆಯಾಗುವುದನ್ನು ತಡೆಯಲು ಕಾನೂನು ಅರಿವಿನಿಂದ ಸಾಧ್ಯ ಎಂದು ತಿಳಿಸಿದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶೆ ಜ್ಯೋತಿ ಎಸ್. ಕಾಳೆ, ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಕೆ.ಆರ್., ಅಪರ ಸಿವಿಲ್ ನ್ಯಾಯಾಧೀಶೆ ಮಮತಾ ಶಿವಪೂಜಿ, ತಾಲೂಕು ವಕೀಲರ ಸಂಘದ ಕಾರ‌್ಯದರ್ಶಿ ಎ.ಕೃಷ್ಣಮೂರ್ತಿ, ತಹಸೀಲ್ದಾರ್ ಟಿ.ಎಸ್.ಶಿವರಾಜ್, ಡಿವೈಎಸ್ಪಿ ನಾಗರಾಜು, ನಗರಸಭೆ ಆಯುಕ್ತ ರಮೇಶ್ ಸುಣಗಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶುಭಮಂಗಳಾ, ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ್ ಉಪಸ್ಥಿತರಿದ್ದರು.

ವಿವಿಧ ಸೌಲತ್ತುಗಳ ವಿತರಣೆ; ಕಾರ್ಮಿಕ ಇಲಾಖೆಯಿಂದ ಇಪ್ಪತ್ತು ಮಂದಿ ಕಟ್ಟಡ ಕೂಲಿ ಕಾರ್ಮಿಕರಿಗೆ ಗಾರೆ ಕೆಲಸದ ಕಿಟ್, ಸುರಕ್ಷಾ ಕಿಟ್, ನೋಂದಣಿ ಗುರುತಿನ ಚೀಟಿ ವಿತರಿಸಲಾಯಿತು. 14 ಮಂದಿಗೆ ವಿಧವಾ ವೇತನ, 14 ಮಂದಿಗೆ ಅಂಗವಿಕಲರ ವೇತನ, 10 ಮಂದಿಗೆ ಸಂಧ್ಯಾ ಸುರಕ್ಷ ಯೋಜನೆಯಲ್ಲಿ ಪಿಂಚಣಿ, 10 ಮಂದಿಗೆ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net