ಕಾನೂನಿನ ಅರಿವು ಮೂಡಿಸಬೇಕು

30 YERRISWAMY 06
Published on

ಬಳ್ಳಾರಿ : ಅಧಿಕಾರಿಗಳು ಮಾನವ ಕಳ್ಳ ಸಾಗಾಣಿಕೆ ಕುರಿತು ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶ ರಾಜೇಶ್ ಎನ್.ಹೊಸಮನೆ ತಿಳಿಸಿದರು.
ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿನ ಅಪ್ರಾಪ್ತ ಮಕ್ಕಳು, ಮಹಿಳೆಯರು ಸೇರಿದಂತೆ ವ್ಯಕ್ತಿಗಳನ್ನು ಕಳ್ಳ ಸಾಗಾಣಿಕೆ ಮಾಡಿ ಲೈಂಗಿಕ ಶೋಷಣೆ, ಭಿಕ್ಷಾಟನೆ, ಜೀತ, ಬಾಲ ಕಾರ್ಮಿಕರ ಕೆಲಸ, ಅಂಗಾಂಗ ಕಸಿ, ಬಾಲ್ಯ ವಿವಾಹ ಮತ್ತು ವೇಶ್ಯೆವಾಟಿಕೆ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರಲ್ಲಿ ಕಾನೂನು ಮತ್ತು ಶಿಕ್ಷೆ ಬಗ್ಗೆ ಜಾಗೃತಿ ಮೂಡಿಸಿ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಜನ ಸಾಮಾನ್ಯರಲ್ಲಿ ವಿದೇಶಗಳಿಗೆ ಕರೆದೊಯ್ದು ಕೆಲಸ ಕೊಡಿಸುವ ಆಸೆ ಆಮಿಷ ಒಡ್ಡುವಂತಹ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಸಾರ್ವಜನಿಕರು ಎಚ್ಚರವಹಿಸಬೇಕು ಎಂದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ದಂಧೆಯು ಸಮಾಜದ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಮಾನವ ಕಳ್ಳ ಸಾಗಾಣಿಕೆಯಿಂದ ಇಂದಿನ ಪೀಳಿಗೆ ಹಾದಿ ತಪ್ಪುತ್ತಿದೆ. ಆರ್ಥಿಕ ಸಮಸ್ಯೆಯಿಂದ ಪೋಷಕರು ಸಮಾಜದಲ್ಲಿ ಸ್ವಯಂ ಪ್ರೇರಿತರಾಗಿ ಮಾನವ ಕಳ್ಳ ಸಾಗಾಣಿಕೆಗೆ ಒತ್ತು ನೀಡುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿಯ ಬಗ್ಗೆ ವಿವಿಧ ಇಲಾಖೆಗಳ ಸಂಘಟನಾತ್ಮಕ ಸಹಕಾರದಿಂದ ಪೋಷಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net