ಕಾದಾರಿದ ನೀರನ್ನು ಸೇವಿಸಿ

23bdvt2 (1)
ಕೆ.ಎನ್.ಹೇಮಂತ್
Published on

ಭದ್ರಾವತಿ: ತಾಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿ ಹೊಲಗದ್ದೆಗಳ, ಗುಡ್ಡಗಳ ಮಣ್ಣು ಕುಸಿದು ಮಣ್ಣು ಮಿಶ್ರಿತ ನೀರು ಹೊಳೆಗೆ ಸೇರುತ್ತಿರುವುದರಿಂದ ಶುದ್ಧೀಕರಣ ಮಾಡಿದರೂ ಕುಡಿಯುವ ನೀರು ಕೆಂಪಾಗಿ ಬರುತ್ತಿದೆ. ಒಂದೆರಡು ದಿನಗಳ ಕಾಲ ನಾಗರಿಕರು ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಪೌರಾಯುಕ್ತ ಕೆ.ಎನ್.ಹೇಮಂತ್ ತಿಳಿಸಿದರು.

ಘಟಕಗಳಲ್ಲಿ ನೀರನ್ನು ಎಂದಿನಂತೆ ಶುದ್ಧೀಕರಿಸಿಯೇ ಪೂರೈಸಲಾಗುತ್ತಿದೆ. ಆದರೆ ಬಂಡೀಗುಡ್ಡ ಸೇರಿ ಹಲವೆಡೆಗಳಿಂದ ಗುಡ್ಡದ ನೀರು ಹಾಗೂ ಕೃಷಿ ಭೂಮಿಯ ನೀರು ಹೊಳೆಗೆ ಸೇರುತ್ತಿರುವುದರಿಂದ ನೀರಿನ ಬಣ್ಣ ಮಾತ್ರ ಕೆಂಪಗೆ ಕಾಣುತ್ತಿದೆ. ಆದರೆ ನೀರು ಕುಡಿಯಲು ಯೋಗ್ಯವಾಗಿದೆ. ಆದರೂ ಕಾದಾರಿದ ನೀರು ಕುಡಿಯುವುದು ಒಳ್ಳೆಯದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಿನಕ್ಕೆ 3.47 ಕೋಟಿ ಲೀಟರ್ ನೀರನ್ನು ಹೊಳೆಯಿಂದ ಸಂಗ್ರಹಿಸಲಾಗುತ್ತಿದ್ದು, 3.11ಲಕ್ಷ ಲೀ.ಶುದ್ಧೀಕರಿಸಲಾಗುತ್ತಿದೆ. 2.96 ಕೋಟಿ ಲೀ.ನೀರನ್ನು ಜನರಿಗೆ ಸರಬರಾಜು ಮಾಡಲಾಗುತ್ತಿದೆ. ನೀರನ್ನು ಒಂದೆರಡು ದಿನಗಳ ಕಾಲ ಶೇಖರಿಸಿಟ್ಟು ನಂತರ ಕುಡಿಯಲು ಸರಬರಾಜು ಮಾಡಿದರೆ ಸಂಗ್ರಹಿಸಿದ ನೀರು ತಿಳಿಯಾಗುವುದರಿಂದ ನೀರು ಬೆಳ್ಳಗೆ ಕಾಣುತ್ತದೆ. ತಾಲೂಕಿನಲ್ಲಿ ನೀರಿನ ಬೇಡಿಕೆ ಹೆಚ್ಚಿದ್ದು ಸಂಗ್ರಹಣೆ ಕಷ್ಟವಾಗುತ್ತಿದೆ. ಹಾಗಾಗಿ ಕುಡಿಯುವ ನೀರಿನ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಾಣುತ್ತಿದೆ. ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಒಂದೆರಡು ದಿನಗಳಲ್ಲಿ ಸರಿಯಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯ ಕದಿರೇಶ್ ಇದ್ದರು.

ಗಣತಿ ಶೇ.89ರಷ್ಟು ಪೂರ್ಣ

ಚಾಲ್ತಿಯಲ್ಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ತಾಲೂಕಿನಲ್ಲಿ ಶೇ.89ರಷ್ಟು ಪೂರ್ಣಗೊಂಡಿದೆ. ಗಣತಿಗಾಗಿ ಮನೆಗಳಿಗೆ ಬರುವ ಸಿಬ್ಬಂದಿಗೆ ನಾಗರಿಕರು ಸಹಕಾರ ನೀಡುವಂತೆ ಕೆ.ಎನ್.ಹೇಮಂತ್ ಮನವಿ ಮಾಡಿದರು. ಆಧಾರ್ ಕಾರ್ಡ್, ರೇಷನ್‌ಕಾರ್ಡ್, ಗೃಹಭಾಗ್ಯ, ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳನ್ನು ಆಧಾರವಾಗಿರಿಸಿ ಸಮೀಕ್ಷೆ ಮಾಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net