ಹುಲಿಯೂರುದುರ್ಗ: ಕುಣಿಗಲ್ ತಾಲೂಕಿನ ನಿಂಗಿಕೊಪ್ಪಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಿಡಿಮದ್ದು ಇಟ್ಟು ಕಾಡುಹಂದಿ ಕೊಂದ ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ. ನಾಗಮಂಗಲ ತಾಲೂಕಿನ ಸುಭಾಷ್ ನಗರ ನಿವಾಸಿ ಶಂಕರ್ ನಾಗ್ (23) ಸೇರಿ ಕಾನೂನು ಸಂರ್ಷಕ್ಕೊಳಪಟ್ಟ ಇಬ್ಬರನ್ನು ಬಂಧಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಬೇಟೆಯಾಡುವ ಸಲುವಾಗಿ ಸಿಡಿಮದ್ದನ್ನು ಇಡಲಾಗಿತ್ತು. ಸೋಮವಾರ ತಡರಾತ್ರಿ
ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಡಿಮದ್ದು ಸ್ಫೋಟದ ಶಬ್ದ ಕೇಳಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕಾಡುಹಂದಿ ಮೃತಪಟ್ಟಿರುವುದು ಕಂಡುಬಂದಿದೆ. ಇಲಾಖೆಯ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಆರೋಪಿಗಳ ಸೆರೆಗೆ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಮಂಗಳವಾರ ಮುಂಜಾನೆ ಕಾಡುಹಂದಿ ಕೊಂಡೊಯ್ಯುವ ವೇಳೆ ವಲಯ ಅರಣ್ಯಾಧಿಕಾರಿ ಜಗದೀಶ್ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಒಂದು ದ್ವಿಚಕ್ರ ವಾಹನ, 28 ಸಿಡಿಮದ್ದುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಹುಲಿಯೂರುದುರ್ಗ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಹುಲಿಯೂರುದುರ್ಗ ಪೊಲೀಸರು ಅಮೃತೂರು ಸಿಪಿಐ ಮಾದ್ಯಾನಾಯಕ್ ನೇತೃತ್ವದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ತಂಡದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ವಲಯ ಅರಣ್ಯಧಿಕಾರಿ ಜಗದೀಶ್, ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್, ಪಶು ವೈದ್ಯಾಧಿಕಾರಿ ನವೀನ ಇದ್ದರು.