ಬುಕ್ಕಾಪಟ್ಟಣ: ಶಿರಾ ತಾಲೂಕಿನ ಬುಕ್ಕಾಪಟ್ಟಣದ ಚಿಂಕಾರ ವನ್ಯಜಿವಿಧಾಮದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಮಧುಗಿರಿ ತಾಲೂಕಿನ ತಿಪ್ಪನಹಳ್ಳಿಯ 18 ಮಂದಿಯನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮಾರಕಾಸ್ತ್ರಗಳು,ಬೇಟೆಗೆ ಬಳಸಲಾದ ಬಲೆ ಹಾಗೂ ಕೃತ್ಯಕ್ಕೆ ಬಳಸಲಾದ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬುಕ್ಕಾಪಟ್ಟಣ ವನ್ಯಜಿವಿಧಾಮದಲ್ಲಿ ಕಾಡು ಪ್ರಾಣಿಗಳ ಬೇಟೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬೆಳಗ್ಗೆ ಕಾರ್ಯಾಚರಣೆಗಿಳಿದು ಬೇಟೆಗೆ ಬಂದ ತಂಡವನ್ನು ಬಂಧಿಸಿದ್ದಾರೆ. ವಲಯ ಅರಣ್ಯ ಅಧಿಕಾರಿ ಚಂದನ್ ಕುಮಾರ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಿರಣ್ ನೇತೃತ್ವದಲ್ಲಿ, ರೇವಣ ಸಿದ್ಧಪ್ಪ ಕಾಳಗಿ, ಪರಶುರಾಮ, ನವೀನ್ ಕುಮಾರ್, ಹರೀಶ್, ಗುರುವಯ್ಯ, ನಾಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.