‘ಕಾಡು’ತ್ತಿರುವ ಎಳೆಯ ‘ಕುಡಿ’ಗಳ ಸಾವು

13Rajesh5
Published on

ಚಾಮರಾಜನಗರ: ಆವತ್ತು ತಾಯಿಯೊಂದಿಗೆ ವಿಷವುಂಡು ನರಳಾಡಿ ನಾಲ್ಕು ಕಂದಮ್ಮಗಳು ಸತ್ತವು. ಇವತ್ತು ಅಮ್ಮನಿಂದ ಬೇರ್ಪಟ್ಟ ಇಬ್ಬರು ತಬ್ಬಲಿಗಳು ಮೃತಪಟ್ಟಿದ್ದಾರೆ. ಹೀಗೆ ಎಳೆಯ ಕುಡಿಗಳ ಸಾವು ‘ಕಾಡು’ತ್ತಿದೆ.

ತಿಂಗಳ ಹಿಂದೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷ ಪ್ರಾಶನಕ್ಕೆ ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಮೃತಪಟ್ಟ ಘಟನೆ ಇನ್ನೂ ಮಾಸಿಲ್ಲ. ಆಗಲೇ ಪಕ್ಕದ ಕಾಡಾಗಿರುವ ಕಾವೇರಿ ವನ್ಯಜೀವಿಧಾಮದ ಶಾಗ್ಯ ಶಾಖೆಯ ಹೊಳೆ ಮುರದಟ್ಟಿ ಗಸ್ತಿನ ಕಿರುಬನಕಲ್ಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ. ಎರಡೂ ಪ್ರಕರಣಗಳಿಂದಾಗಿ ಒಟ್ಟು 6 ಹುಲಿ ಮರಿಗಳ ಸಾವು ಸಂಭವಿಸಿ ವ್ಯಾಘ್ರಗಳ ಕಾನನದ ಭವಿಷ್ಯದ ಮೇಲೆ ಕಾರ್ಮೋಡ ಕವಿಸಿದೆ.

ಮಲೆ ಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮಗಳೆರಡೂ ಒಂದಕ್ಕೊಂದು ಬೆಸೆದುಕೊಂಡಿವೆ. ಬಂಡೀಪುರ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳ ನಂತರ ಹುಲಿಗಳ ಆವಾಸ ಸ್ಥಾನಗಳಾಗಿ ಬದಲಾಗುತ್ತಿವೆ. ಈ ಎರಡೂ ಕಾಡುಗಳಲ್ಲಿ 2016ರಲ್ಲಿ ನೇಚರ್ ಕನ್ಸರ್ವೆಷನ್ ೌಂಡೇಷನ್‌ನ ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ ನಡೆಸಿದ್ದ ವೈಜ್ಞಾನಿಕ ಅಧ್ಯಯನ ನಡೆದಿ 12ಕ್ಕೂ ಹೆಚ್ಚು ಹುಲಿಗಳಿವೆ ಎಂದು ಅಂದಿನ ಸಚಿವ ಎಚ್.ಎಸ್.ಮಹದೇವಪ್ಪ ಅವರಿಗೆ ವರದಿ ನೀಡಿದ್ದರು. ನಂತರದ ವರ್ಷಗಳಲ್ಲಿ ಈ ಕಾಡುಗಳಲ್ಲಿ ಹುಲಿಗಳ ಸಂಖ್ಯೆ 18ಕ್ಕೇರಿತು. ಹೀಗೆ ವ್ಯಾಘ್ರಗಳ ಸಂತತಿ ವೃದ್ಧಿಯಾಗುತ್ತಿರುವ ಸಂದರ್ಭದಲ್ಲಿ ಐದು ಹುಲಿಗಳ ಸಾವು ದೊಡ್ಡ ಪೆಟ್ಟು ಕೊಟ್ಟಿತು. ಇದರಲ್ಲಿ ನಾಲ್ಕು ಮರಿಗಳು ಮೃತಪಟ್ಟು ಕಾಡಿನ ಭವಿಷ್ಯವನ್ನು ಮಂಕು ಮಾಡಿತು. ತಾಯಿಯಿಂದ ಬೇರ್ಪಟ್ಟು ಸ್ವಂತ ಸರಹದ್ದು ಸ್ಥಾಪಿಸಿಕೊಳ್ಳಬೇಕಿದ್ದ ಹುಲಿ ಮರಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂತತಿ ಹೆಚ್ಚಳಕ್ಕೆ ಕಾರಣವಾಗುತ್ತಿದ್ದವು. ಕಾವೇರಿ ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟು ಮೃತಪಟ್ಟ ಹುಲಿ ಮರಿಗಳ ಸಾವೂ ಸಹ ಇದೇ ರೀತಿಯ ನಷ್ಟವನ್ನು ತಂದೊಡ್ಡಿವೆ.

ಬಂಡೀಪುರದಲ್ಲಿ ತಬ್ಬಲಿಗಳ ಸಾವು:

ಕಾವೇರಿ ವನ್ಯಜೀವಿಧಾಮದಲ್ಲಿ ಎರಡು ಹುಲಿ ಮರಿಗಳ ಮೃತಪಟ್ಟ ರೀತಿಯಲ್ಲೇ 2021ರಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲೂ ಹುಲಿ ಮರಿಗಳ ಮರಣವಾಗಿತ್ತು. 2021ರ ಮಾರ್ಚ್‌ನಲ್ಲಿ ನುಗು ವನ್ಯಜೀವಿ ವಲಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 2 ತಿಂಗಳ ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ನಾಲ್ಕರಲ್ಲಿ ಎರಡು ಹೆಣ್ಣು ಹುಲಿ ಹಸಿವಿನಿಂದ ಬಳಲಿ ಸ್ಥಳದಲ್ಲೇ ಹಸುನೀಗಿತ್ತು. ಉಳಿದ ಎರಡು ಹುಲಿ ಮರಿಗಳು ನಿತ್ರಾಣಗೊಂಡಿದ್ದವು. ಇವುಗಳನ್ನು ಮೈಸೂರಿನ ಶ್ರೀಚಾಮರಾಜೇಶ್ವರ ಮೃಗಾಲಯಕ್ಕೆ ಆರೈಕೆಗೆಂದು ರವಾನಿಸಲಾಗಿತ್ತು. ಅಲ್ಲಿ ಒಂದು ಹೆಣ್ಣು ಹುಲಿ ಮರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತು. ಒಟ್ಟು ಮೂರು ಹುಲಿ ಮರಿಗಳು ಅಂದು ಮೃತಪಟ್ಟವು. ಹೀಗೆ ತಾಯಿಯಿಂದ ಬೇರ್ಪಟ್ಟ ಹುಲಿ ಮರಿಗಳು ಬದುಕುಳಿಯುವುದು ದೊಡ್ಡ ಸವಾಲೇ ಸರಿ. ಅರಣ್ಯ ಇಲಾಖೆಯ ಪ್ರಾಥಮಿಕ ತನಿಖೆ ಪ್ರಕಾರ, ಆ.12ರಂದು ಕಾವೇರಿ ವನ್ಯಜೀವಿಧಾಮದಲ್ಲಿ ಮೃತಪಟ್ಟಿರುವ ಎರಡು ಹುಲಿ ಮರಿಗಳು ತಾಯಿಯಿಂದ ಬೇರ್ಪಟ್ಟಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸತ್ಯಾಂಶ ಹೊರಬಲಿದೆ.

ತಾಯಿಯೇ ಮೊದಲ ಗುರು: ಮನುಷ್ಯರಷ್ಟೇ ಅಲ್ಲ ಸಕಲ ಪ್ರಾಣಿಗಳಿಗೂ ಮಾತೃ ಮಮತೆ ಒಂದೇ. ತಾಯಿಯೇ ಮೊದಲ ಗುರು ಎನ್ನುವುದು ಹುಲಿಗಳಿಗೂ ಅನ್ವಯ. ತನ್ನ ಮರಿಗಳನ್ನು 2ರಿಂದ 3 ವರ್ಷ ಜತೆಗಿಟ್ಟುಕೊಂಡು ಸಂರಕ್ಷಣೆ ಮಾಡುವುದು, ಪ್ರಾಣಿಗಳ ದಾಳಿ ತಪ್ಪಿಸಿ, ಬೇಟೆಯಾಡುವುದನ್ನು ಕಲಿಸಿಕೊಡುತ್ತದೆ. ನಂತರ ಹುಲಿ ಮರಿಗಳು ತನ್ನ ಸ್ವಂತ ಆವಾಸ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತವೆ. ಇಷ್ಟರ ಮಧ್ಯೆ ತಾಯಿಯಿಂದ ಮರಿಗಳು ಬೇರ್ಪಟ್ಟರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳಿವೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಶಾಖೆಯ ಹೊಳೆ ಮುರದಟ್ಟಿ ಗಸ್ತಿನ ಕಿರುಬನಕಲ್ಲು ಅರಣ್ಯ ಪ್ರದೇಶದಲ್ಲಿ 2 ಹುಲಿ ಮರಿಗಳು ಮೃತಪಟ್ಟ ಸ್ಥಳಕ್ಕೆ ಬುಧವಾರವೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇದಕ್ಕೂ ಮೊದಲು ಹನೂರಿನ ಅರಣ್ಯ ಇಲಾಖೆಯ ಕಚೇರಿಗೆ ಆಗಮಿಸಿದ ಸಿಸಿಎಫ್ ಹೀರಾಲಾಲ್ ಅವರು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು. ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು. ಡಿಸಿಎಫ್ ಸುರೇಂದ್ರ, ಪ್ರೋಬೇಷನರಿ ಎಸಿಎಫ್‌ಗಳಾದ ಉಮಾಪತಿ, ಮನೋಹರ್ ಸ್ವಪ್ನಿಲ್ ಅಹಿರೆ, ಆರ್‌ಎಫ್‌ಓ ನಿರಂಜನ್ ಹಾಗೂ ಇನ್ನಿತರರು ಇದ್ದರು. ಮೃತಪಟ್ಟ ಹುಲಿ ಮರಿಗಳನ್ನು ಎನ್‌ಟಿಸಿಎ ತಂಡದ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಅಂಗಾಂಗ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಹುಲಿ ಮರಿಗಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ತಾಯಿ ಹುಲಿಗೆ ಇನ್ನೂ ಕೆಲವು ಮರಿಗಳು ಇರಬಹುದು. ಹಾಗಾಗಿ ತಾಯಿ ಹುಲಿ ಪತ್ತೆಗೆ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಕ್ಯಾಮರಾ ಅಳವಡಿಸಿ ನಿಗಾ ವಹಿಸಲಾಗಿದೆ. ಇತ್ತೀಚಿಗೆ ಕಾವೇರಿ ವನ್ಯಜೀವಿ ಧಾಮದಲ್ಲೂ ಹುಲಿಗಳ ಸಂಖ್ಯೆ ಹೆಚ್ಚಳ ಕಂಡು ಬಂದಿದೆ. ಸುರೇಂದ್ರ, ಡಿಸಿಎ್, ಕಾವೇರಿ ವನ್ಯಜೀವಿಧಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net