

ವಿಜಯವಾಣಿ ಸುದ್ದಿಜಾಲ ಹುಳಿಯಾರು/ಚಿಕ್ಕನಾಯಕನಹಳ್ಳಿ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಂಚರಿಸಿದ ಪಂಚರತ್ನ ಯಾತ್ರೆಗೆ ಭರ್ಜರಿ ಸ್ವಾಗತ ಸಿಕ್ಕಿತು.
ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಸಾವಿರಾರು ಜನ ಜಮಾಯಿಸಿ ನೆಚ್ಚಿನ ನಾಯಕನಿಗೆ ವಿವಿಧ ರೀತಿಯ ಮಾಲೆ ಹಾಕುವ ಜತೆಗೆ ಜೈಕಾರ ಮೊಳಗಿಸಿದ್ದು ಕ್ಷೇತ್ರದಲ್ಲಿ ಜೆಡಿಎಸ್‌ಗಿರುವ ಬಲ ಪ್ರದರ್ಶಿಸಿತು. ಬುಧವಾರ ಬೆಳಗ್ಗೆ ಪೂರ್ವ ದಿಕ್ಕಿನ ಬುಕ್ಕಾಪಟ್ಟಣ ಹೋಬಳಿಯ ಬೆಂಚೆ ಗೇಟ್‌ನಿಂದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಿದ ಯಾತ್ರೆ ಬರೋಬ್ಬರಿ 100ಕಿಮೀ ಸಂಚರಿಸಿದ್ದು ಸೋಜಿಗ ಎನಿಸಿತು. ಭೌಗೋಳಿಕವಾಗಿಯೂ ಅತ್ಯಂತ ದೊಡ್ಡ ಕ್ಷೇತ್ರ ಎನಿಸಿರುವ ಚಿಕ್ಕನಾಯಕನಹಳ್ಳಿ ಎಲ್ಲ ಹೋಬಳಿಗಳಿಗೂ ಯಾತ್ರೆ ಸಾಗಿಬಂದಿದ್ದು ಎಲ್ಲೆಡೆಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಬೋರನಕಣಿವೆ ಜಲಾಶಯಕ್ಕೆ ಬಾಗಿನ ಸಲ್ಲಿಸಿ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಕಾಡುಗೊಲ್ಲರ ಕಷ್ಟಗಳ ಬಗ್ಗೆ ಪ್ರಸ್ತಾಪಿಸಿದರು. ದೇವೇಗೌಡರ ಹೋರಾಟದ ಫಲವಾಗಿಯೇ ವಾಲ್ಮೀಕಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಲಭಿಸಿದೆ, ಕಾಡುಗೊಲ್ಲರಿಗೂ ಎಸ್‌ಟಿ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲರ ಪ್ರಗತಿಗಾಗಿ ಆರ್ಥಿಕ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸರಳ, ಸಜ್ಜನ ಎನಿಸಿರುವ ಸಿ.ಬಿ.ಸುರೇಶ್‌ಬಾಬು ನನ್ನ ತಮ್ಮನಿದ್ದಂತೆ, ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದರೆ ಅವರಿಗೆ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಜೆಡಿಎಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದರು. ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು, ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಯ್ಯ, ಜಿಪಂ ಮಾಜಿ ಸದಸ್ಯ ಕಲ್ಲೇಶ್, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಬಿ.ರವಿಕುಮಾರ್, ಚಿಕ್ಕಣ್ಣ ಇದ್ದರು.
ಬೆಂಚೆಗೇಟ್ ಮೂಲಕ ಪ್ರವೇಶ
ಬೆಂಚೆಗೇಟ್ ಮೂಲಕ ಪ್ರವೇಶ ಪಡೆದ ಯಾತ್ರೆ ಕಂಚಿಗಾನಹಳ್ಳಿ ಗೇಟ್, ಹೊನ್ನೆನಹಳ್ಳಿ, ಬುಕ್ಕಾಪಟ್ಟಣ, ಹೊಯ್ಸಳಕಟ್ಟೆ, ಹುಳಿಯಾರು, ದೊಡ್ಡಎಣ್ಣೆಗೆರೆ, ಹಂದನಕೆರೆ, ಮತಿಘಟ್ಟ, ಬೇವಿನಹಳ್ಳಿ, ಗೋಡೆಕೆರೆ, ಚಿಕ್ಕನಾಯಕನಹಳ್ಳಿ ಮೂಲಕ ತಿಮ್ಮನಹಳ್ಳಿಯಲ್ಲಿ ವಾಸ್ತವ್ಯ ಮಾಡಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ಪ್ಯಾರಾಗ್ಲೈಡಿಂಗ್ ಸ್ವಾಗತ
ಡಿ.29ರಂದು ತುಮಕೂರು ಗ್ರಾಮಾಂತರ ಕ್ಷೇತ್ರ ಪ್ರವೇಶಸಲಿರುವ ರಥಯಾತ್ರೆ ಸ್ವಾಗತಕ್ಕೆ ಪ್ಯಾರಾ ಗ್ಲೈಡಿಂಗ್ ಮೂಲಕ ಹೂಮಳೆ ಸುರಿಸಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಶಾಸಕ ಡಿ.ಸಿ.ಗೌರಿಶಂಕರ್ ಸಜ್ಜಾಗಿದ್ದಾರೆ. ಹೆಬ್ಬೂರು, ನಾಗವಲ್ಲಿ, ಹೊನ್ನುಡಿಕೆ, ಹೊನ್ನಡಿಕೆ ಹ್ಯಾಂಡ್‌ಪೋಸ್ಟ್, ಗೂಳೂರು, ಪಂಡಿತನಹಳ್ಳಿ , ಊರ್ಡಿಗೆರೆ, ಬೆಳಗುಂಬ ಮಾರ್ಗವಾಗಿ ಯಲ್ಲಾಪುರದವರೆಗೂ ರಥಯಾತ್ರೆ ಸಾಗಲಿದೆ. ಮಾರ್ಗದುದ್ದಕ್ಕೂ ಯಾತ್ರೆ ಮೇಲೆ ಹೂಮಳೆ ಸುರಿಸಲು 200ಕ್ಕೂ ಹೆಚ್ಚು ಜೆಸಿಬಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಯಲ್ಲಾಪುರದಲ್ಲಿ ದಲಿತರ ಮನೆಯಲ್ಲಿ ಎಚ್ಡಿಕೆ ಗ್ರಾಮವಾಸ್ತವ್ಯ ಮಾಡಲಿದ್ದಾರೆ.
ಹೊಯ್ಸಳಕಟ್ಟೆಯಲ್ಲಿ ಕಣ್ಣೀರಿಟ್ಟ ಸುರೇಶ್‌ಬಾಬು
ಸುರೇಶ್‌ಬಾಬು ಅವರನ್ನು ಮಂತ್ರಿ ಮಾಡಬೇಕು ಎಂದು ಹೊಯ್ಸಳಕಟ್ಟೆಯಲ್ಲಿ ಯಾತ್ರೆ ಸಾಗುವ ವೇಳೆ ಜನ ಕೂಗಿದರು. ಆತ ನನ್ನ ತಮ್ಮನಿದ್ದಂತೆ, ಮೊದಲು ಗೆಲ್ಲಿಸಿ, ತಪ್ಪದೇ ಮಂತ್ರಿ ಮಾಡುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದಂತೆ ಸುರೇಶ್‌ಬಾಬು ಕಣ್ಣೀರಿಟ್ಟರು. ಎಚ್ಡಿಕೆ ಕಿಚನ್ ಕ್ಯಾಬಿನೆಟ್‌ನಲ್ಲಿ ಗುರುತಿಸಿಕೊಂಡಿದ್ದ ಬಾಬು, ಮೈತ್ರಿ ಸರ್ಕಾರದ ಪತನದ ಬಳಿಕ ಕುಮಾರಸ್ವಾಮಿ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ಕೈ ಹಿಡಿಯುವ ವದಂತಿ ದಟ್ಟವಾಗಿದ್ದವು. ಎಲ್ಲವನ್ನೂ ನೆನೆದು ಬಾಬು ಕಣ್ಣೀರಾದರು.
ರಾಮನಗರದಲ್ಲಿ ‘ರಾಮಮಂದಿರ’ ಚುನಾವಣಾ ಗಿಮಿಕ್
ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಚಿವ ಡಾ.ಅಶ್ವತ್ಥನಾರಾಯಣ್ ನೀಡಿರುವ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದು, ಕಳೆದ ಮೂರು ವರ್ಷದಲ್ಲಿ ಏಕೆ ನಿರ್ಮಿಸಲಾಗಲಿಲ್ಲ ಎಂದು ಪ್ರಶ್ನಿಸಿದರು. ಈಗ ಚುನಾವಣೆ ಬರುತ್ತಿರುವ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ರಾಮಮಂದಿರ ನಿರ್ಮಾಣ ಮಾಡ್ತಿವಿ ಎಂದು ಘೋಷಣೆ ಮಾಡ್ತಾರೆ, ಇಷ್ಟು ದಿನ ಏನು ಮಾಡುತ್ತಿದ್ದರು ಎಂದರು. ನಮ್ಮ ರಾಜ್ಯ ದರಿದ್ರ ರಾಜ್ಯ ಅಲ್ಲ, ಯುಪಿ ಸಿಎಂ ಕರೆತಂದು ಇಲ್ಲಿ ಫೌಂಡೇಶನ್ ಹಾಕುವ ಅವಶ್ಯಕತೆಯಿಲ್ಲ, ನಮ್ಮ ಸುತ್ತೂರು, ಆದಿಚುಂಚನಗಿರಿ ಹಾಗೂ ಕನಕ ಪೀಠದ ಶ್ರೀಗಳನ್ನು ಕರೆತಂದು ನಾನೇ ಪೂಜೆ ಮಾಡಿಸುತ್ತೇನೆ ಎಂದರು. ನನ್ನ ಕ್ಷೇತ್ರದಲ್ಲಿ ಇವರೇನು ಬಂದು ರಾಮಮಂದಿರ ಕಟ್ಟೋದು ಬೇಕಾಗಿಲ್ಲ, ನಂಗೆ ದೇವರು ಇನ್ನೂ ಶಕ್ತಿ ಕೊಟ್ಟಿದ್ದಾನೆ. ಬೇರೆ ರಾಜ್ಯದಿಂದ ಯಾರನ್ನೋ ಕರೆತಂದು ಚುನಾವಣೆ ಸಮಯದಲ್ಲಿ ಇದೆಲ್ಲ ಮಾಡೋದು ಬೇಡ ಎಂದರು. ರಾಮಮಂದಿರಕ್ಕೆ ನಾನು ಯಾವುದೇ ವಿರೋಧ ಮಾಡಲ್ಲ, ಕಟ್ಟ ಬೇಕು ಅಂದ್ರೆ ನಾನೇ ಕಟ್ಟುತ್ತೇನೆ. ಚುನಾವಣೆ ಹತ್ತಿರ ಬಂದಾಗ ಇವರ ಆಟ ಏನು ನಡಿಯಲ್ಲ. ಜನ ಇವರಿಗೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.
ಎಚ್‌ಡಿಕೆಗೆ ಸ್ಕೂಲ್ ಬ್ಯಾಗ್‌ನ ಹಾರ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂಚಿಗಾನಹಳ್ಳಿಯ ಗ್ರಾಮಸ್ಥರು ಮಕ್ಕಳ ಸ್ಕೂಲ್ ಬ್ಯಾಗ್‌ನಿಂದ ಮಾಡಿದ್ದ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದರು. ಗ್ರಾಮಸ್ಥರು ಸ್ಕೂಲ್ ಬ್ಯಾಗ್‌ಗಳನ್ನು ಒಟ್ಟು ಮಾಡಿ, ಬೃಹತ್ ಗಾತ್ರದ ಹಾರ ತಯಾರಿಸಿದ ವಿಭಿನ್ನ ಕಲ್ಪನೆಯನ್ನು ಕುಮಾರಸ್ವಾಮಿ ಮೆಚ್ಚಿಕೊಂಡಿದ್ದು, ಪಂಚರತ್ನ ಯೋಜನೆಗಳು ಜನರ ಮನಸ್ಸಿಗೆ ತಟ್ಟಿವೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ. ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಪಂಚರತ್ನ ಯೋಜನೆಯಲ್ಲಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಸ್ಕೂಲ್ ಬ್ಯಾಗ್ ಹಾರದಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಿಸಿ, ಬಡವರ ಮಕ್ಕಳಿಗೂ ಕಾನ್ವೆಂಟ್ ಶಿಕ್ಷಣ ಬೇಕ್ರಯ್ಯ.. ಎಂದು ಬರೆದಿತ್ತು.