

ಶನಿವಾರಸಂತೆ: ಕಾಫಿ ತೋಟದ ನೀರು ಸಂಗ್ರಹ ತೊಟ್ಟಿಯೊಳಗೆ ಬಿದ್ದಿದ್ದ ಕಾಡು ಕೋಣ(ಕಾಟಿ)ವೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು.
ಶನಿವಾರಸಂತೆ ಹೋಬಳಿಗೆ ಸೇರಿದ ಎಳನೀರುಗುಂಡಿ ಗ್ರಾಮದ ಗ್ರೀನ್‌ಲ್ಯಾಂಡ್ ಕಾಫಿ ಎಸ್ಟೇಟ್‌ನಲ್ಲಿ ನೀರು ಸಂಗ್ರಹಿಸಲು ನಿರ್ಮಿಸಿದ್ದ ತೊಟ್ಟಿಯೊಳಗೆ ಶನಿವಾರ ರಾತ್ರಿ ಪಕ್ಕದ ಮೀಸಲು ಅರಣ್ಯದಿಂದ ಬಂದ ಕಾಟಿಯೊಂದು ಆಕಸ್ಮಿಕವಾಗಿ ಬಿದ್ದಿದೆ. ಕಾಟಿಯು ಭಾನುವಾರ ಬೆಳಗಿನವರೆಗೆ ತೊಟ್ಟಿಯಿಂದ ಹೊರ ಬರಲು ಪರದಾಡುತ್ತಿತ್ತು. ಬೆಳಗ್ಗೆ ಎಂದಿನಂತೆ ತೋಟದಲ್ಲಿ ಕೆಲಸ ಮಾಡಲು ಬಂದ ಕಾರ್ಮಿಕರು ನೀರಿನ ತೊಟ್ಟಿಯೊಳಗೆ ಕಾಡುಕೋಣ ನರಳಾಡುತ್ತಿದ್ದನ್ನು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಶನಿವಾರಸಂತೆ ಆರ್‌ಎಫ್‌ಒ ಪ್ರಪುಲ್ ಶೆಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಟಿಯನ್ನು ರಕ್ಷಿಸಿದರು. ನಂತರ ಪಕ್ಕದ ಮಾಲಂಬಿ ಮೀಸಲು ಅರಣ್ಯಕ್ಕೆ ಬಿಟ್ಟರು. ತಿಂಗಳ ಹಿಂದೆಯಷ್ಟೇ ಇದೇ ಗ್ರಾಮದ ಕಾಫಿ ತೋಟವೊಂದರಲ್ಲಿ ನೀರು ಸಂಗ್ರಹ ತೊಟ್ಟಿಯೊಳಗೆ ಪಕ್ಕದ ಅರಣ್ಯದಿಂದ ಬಂದ ಕಾಡಾನೆಯೊಂದು ಬಿದ್ದು ಮೃತಪಟ್ಟಿತ್ತು.