ಕಾಡುಕೋಣ ಬೇಟೆಯಾಡಿದ್ದವನ ಬಂಧನ

Published on

ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ರಾಮಾಪುರ ವಲಯ ಅರಣ್ಯ ಪ್ರದೇಶದಲ್ಲಿ ಕಾಡು ಕೋಣವನ್ನು ಬೇಟೆಯಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.

ಕೊಳ್ಳೇಗಾಲದ ತಾಲೂಕಿನ ಮೇಗಲದೊಡ್ಡಿ ಗ್ರಾಮದ ಜೋಸೆಫ್ ಬಂಧಿತ ಆರೋಪಿ. ಹನೂರು ತಾಲೂಕಿನ ಕೀರೆಪಾತಿ ಗ್ರಾಮದ ಪೆರಿಯನಾಯಗಂ ಹಾಗೂ ಸಂದನಪಾಳ್ಯ ಗ್ರಾಮದ ಕುಮಾರ್ ಪರಾರಿಯಾದವರು. ಈ ಮೂವರು ಹೂಗ್ಯಂ ಗಸ್ತಿನ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ನಾಡ ಬಂದೂಕಿನಿಂದ ಕಾಡು ಕೋಣವನ್ನು ಬೇಟೆಯಾಡಿ, ಮಾಂಸವನ್ನು ಬೇರ್ಪಡಿಸಿದ್ದರು. ಈ ಬಗ್ಗೆ ಡಿಸಿಎಫ್ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಉಮಾಪತಿ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದಾಗ ಜೋಸೆಫ್ ಸ್ಥಳದಲ್ಲಿಯೇ ಸಿಕ್ಕಿ ಬಿದ್ದರೆ, ಇನ್ನಿಬ್ಬರು ಪರಾರಿಯಾದರು ಎನ್ನಲಾಗಿದೆ.

ಬಳಿಕ ಕೃತ್ಯಕ್ಕೆ ಬಳಸಿದ ನಾಡ ಬಂದೂಕು, ಪರಿಕರ ಹಾಗೂ ಮಾಂಸವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಪರಾರಿಯಾಗಿರುವವರ ಪತ್ತೆಗೆ ಬಲೆ ಬೀಸಲಾಗಿದೆ. ದಾಳಿ ಕಾರ್ಯಾಚರಣೆ ವೇಳೆ ಡಿಆರ್‌ಎಫ್‌ಒ ಮಧುಕುಮಾರ್, ಸಿಬ್ಬಂದಿ ಅವಿನಾಶ್, ಮಹದೇವಸ್ವಾಮಿ, ಕೃಷ್ಣಪ್ಪ, ರಮೇಶ್, ಅಣ್ಣಯ್ಯ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net