ಕಾಡುಕೋಣ ದಾಳಿಗೆ ಕಾಫಿ ಬೆಳೆಗಾರ ಬಲಿ

mdg death
Published on

ಮೂಡಿಗೆರೆ: ದುರ್ಗದಹಳ್ಳಿಯಲ್ಲಿ ಕಾಡುಕೋಣದ ದಾಳಿಗೆ ಕಾಫಿ ಬೆಳೆಗಾರ ಡಿ.ವಿ.ರಮೇಶ್ ಗೌಡ(52) ಭಾನುವಾರ ಬಲಿಯಾಗಿದ್ದಾರೆ.

ಭಾನುವಾರ ಮಧ್ಯಾಹ್ನ ದುರ್ಗದಹಳ್ಳಿ ಸಮೀಪ ಹಲಗಡಕ ಎಂಬಲ್ಲಿರುವ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡುಕೋಣ ಹಿಂಬದಿಯಿಂದ ಬಂದು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿತು. ತೋಟದಲ್ಲಿ ರಮೇಶ್ ಗೌಡ ಒಬ್ಬರೇ ಕೆಲಸ ಮಾಡುತ್ತಿದ್ದರಿಂದ ಬಹಳ ಹೊತ್ತು ವಿಷಯ ಯಾರಿಗೂ ತಿಳಿದಿಲ್ಲ. ತೀವ್ರವಾಗಿ ಗಾಯಗೊಂಡ ಅವರು ಜೋರಾಗಿ ಚೀರಿಕೊಳ್ಳುತ್ತಿದ್ದ ಶಬ್ದ ಕೇಳಿ ಪಕ್ಕದ ಹಲಗಡಕ ಎಸ್ಟೇಟ್ ರೈಟರ್ ಮತ್ತು ಕಾರ್ಮಿಕರು ಸ್ಥಳಕ್ಕೆ ಧಾವಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾಡುಕೋಣ ದಾಳಿ ನಡೆಸಿರುವ ಸ್ಥಳ ಕಡಿದಾದ ಪ್ರದೇಶವಾಗಿದ್ದರಿಂದ ಗಾಯಾಳುವನ್ನು ಮನೆಗೆ ತರುವ ಹೊತ್ತಿಗೆ 1 ಗಂಟೆ ಕಳೆದಿದೆ. ರಕ್ತಸ್ರಾವವಾಗಿದ್ದ ಕಾರಣ ಕಳಸ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರು. ರಮೇಶ್ ಗೌಡ ಅವರಿಗೆ ಪತ್ನಿ, 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪುತ್ರ ಇದ್ದಾರೆ. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹವನ್ನು ಕಳಸ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಯಿತು. ಆಸ್ಪತ್ರೆಗೆ ಕಳಸ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದಾಗ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ಕಾಡುಪ್ರಾಣಿಗಳಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಮೃತನ ಕುಟುಂಬಸ್ಥರಿಗೆ 20 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್ ನೀಡಿದರು. ಕುಟುಂಬಸ್ಥರಿಗೆ ಮಾಸಾಶನ ಕೊಡುವುದಾಗಿ ಮತ್ತು ಕಾಡುಕೋಣವನ್ನು ಹಿಡಿದು ಸ್ಥಳಾಂತರಿಸುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಶವ ಸಂಸ್ಕಾರ ಮಾಡಲು ಅನುಮತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net