

ನಗರ: ನಗರ ವಲಯ ಅರಣ್ಯ ವ್ಯಾಪ್ತಿಯ ಬಾಳಮನೆಯಲ್ಲಿ ಸೋಮವಾರ ರಾತ್ರಿ ಧರೆಯಿಂದ ಇಳಿಯುವಾಗ ಮರದ ಬೇರಿಗೆ ಕಾಲುಗಳು ಸಿಕ್ಕಿಹಾಕಿಕೊಂಡ ಕಾಡುಕೋಣ ಮರಿ ಗಂಭೀರ ಗಾಯಗೊಂಡಿದೆ.
ಅಂಡಗದೊದೂರು ಗ್ರಾಪಂ ವ್ಯಾಪ್ತಿಯ ಬಾಳಮನೆಯ ಧರೆಯೊಂದರಲ್ಲಿ ಕಾಡುಕೋಣ ಮರಿಯೊಂದು ಸಿಕ್ಕಿ ಒದ್ದಾಡುತ್ತಿರುವುದನ್ನು ಜನರು ಮಂಗಳವಾರ ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಡಿಆರ್ಎಫ್ಒ ಯೋಗರಾಜ್, ಸಿಬ್ಬಂದಿ ರಾಮು ಸ್ಥಳಕ್ಕೆ ಹೋಗಿ ಅರಣ್ಯ ಇಲಾಖೆ ಜೀಪ್ ಮೂಲಕ ನಗರ ಪಶು ಆಸ್ಪತ್ರೆಗೆ ಕೂಡಲೇ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ರಾತ್ರಿಯೇ ಮರದ ಬೇರಿಗೆ ಕಾಲುಗಳು ಸಿಕ್ಕಿಹಾಕಿಕೊಂಡು ಒದ್ದಾಡಿದ ಪರಿಣಾಮ ಮರಿಯ ಹಿಂಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ. ಈಗಾಗಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ನೋಡಿ ಮುಂದಿನ ಚಿಕಿತ್ಸೆ ನೀಡಬೇಕಾಗಿದೆ ಎಂದು ನಗರ ಪಶು ಆಸ್ಪತ್ರೆಯ ಡಾ. ಮಹಮದ್ ಖಲೀಲ್ ತಿಳಿಸಿದ್ದಾರೆ.
ಕಾಡುಕೋಣ ಮರಿಯನ್ನು ಅರಣ್ಯ ಇಲಾಖೆಯ ಕ್ವಾರ್ಟರ್ಸ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ವೈದ್ಯರೊಂದಿಗೆ ಮಾತನಾಡಿ ಅಗತ್ಯವಿದ್ದರೆ ಅಲ್ಲಿಗೆ ರವಾನಿಸಲಾಗುವುದು ಎಂದು ನಗರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ತಿಳಿಸಿದ್ದಾರೆ.