

ಹಾಸನ: ಕಾಡು ಹಂದಿ ದಾಳಿಯಿಂದ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊಳೆನರಸೀಪುರ ತಾಲೂಕಿನ ಹಾರಗೌಡನಹಳ್ಳಿ ಗ್ರಾಮದ ಇಬ್ಬರು ಮಹಿಳೆಯರನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು ಕೆಟ್ಟ ಗಳಿಗೆ ಅಚಾತುರ್ಯ ನಡೆದಿದೆ. ಯಾವುದಕ್ಕೂ ಹೆದರದೆ ಧೈರ್ಯದಿಂದ ಇರಬೇಕು. ಆಸ್ಪತ್ರೆ ವೆಚ್ಚದ ಕುರಿತು ಯೋಚನೆ ಮಾಡಬೇಡಿ. ಎಲ್ಲವನ್ನೂ ಸರ್ಕಾರ ಭರಿಸುತ್ತದೆ. ಧೈರ್ಯವಾಗಿ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಮನೆಗೆ ತೆರಳಿ ಎಂದು ಸಚಿವರು ಧೈರ್ಯ ತುಂಬಿದರು. ಬೆಡ್ ಮೇಲೆ ಮಲಗಿದ್ದ ಗಾಯಾಳು ಮಹಿಳೆಯರು ಅಳುತ್ತಲೇ ಸಮಸ್ಯೆ ಹೇಳಿಕೊಂಡರು. ಬಳಿಕ ವೈದ್ಯರು ಶಸ್ತ್ರಚಿಕಿತ್ಸೆಯ ಆಗತ್ಯವಿದೆ ಎಂದು ಹೇಳಿದಾಗ ಸಚಿವರು ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದರು.
ಹಾರಗೌಡನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ನಡೆಸಿದ ಕಾಡು ಹಂದಿ ರೈತ ಸಣ್ಣ ರಾಜಣ್ಣ ಅವರನ್ನು ಬಲಿ ಪಡೆದಿತ್ತು. ಕಾಡು ಹಂದಿಯಿಂದ ಪತಿಯನ್ನು ಉಳಿಸಿಕೊಳ್ಳಲು ಧಾವಿಸಿದ್ದ ಪತ್ನಿ ಕಾಂತಮ್ಮ ಹಾಗು ಮತ್ತೊಬ್ಬ ಮಹಿಳೆ ನಂಜಮ್ಮ ಅವರ ಮೇಲೂ ತೀವ್ರವಾಗಿ ದಾಳಿ ನಡೆಸಿ ಗಾಯಗೊಳಿಸಿತ್ತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಡಿಎಫ್‌ಒ ಡಿ.ಮೋಹನ್‌ಕುಮಾರ್ ಮತ್ತಿತರರು ಇದ್ದರು.