ಕಾಡು ಪ್ರಾಣಿಗಳ ಹಾವಳಿಯಿಂದ ಕ್ಷೀಣಿಸಿದ ಭತ್ತದ ಕೃಷಿ

24 gkp. 01
Published on

ಗೋಣಿಕೊಪ್ಪಲು: ಕೊಡಗು ಕೃಷಿ ಪ್ರಧಾನ ಜಿಲ್ಲೆ. ಬಹುತೇಕರು ಕೃಷಿಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಾಫಿ, ಏಲಕ್ಕಿ, ಕಾಳುಮೆಣಸು ವಾಣಿಜ್ಯ ಬೆಳೆಗಳಾದರೆ ಭತ್ತದ ಬೆಳೆ ಜಿಲ್ಲೆಯ ಸಾಂಪ್ರದಾಯಿಕ ಬೆಳೆಯಾಗಿದೆ. ಭತ್ತ ಬೇಸಾಯ ಕೇವಲ ಕೃಷಿಯಾಗಿರದೆ ಇಲ್ಲಿನ ಆಚರಣೆಯ ಭಾಗವಾಗಿದೆ. ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಾದ ಕೈಲು ಮುಹೂರ್ತ, ಹುತ್ತರಿ ಭತ್ತದ ಕೃಷಿಗೆ ಸಂಬಂಧಿಸಿದ್ದಾಗಿದೆ.

ಮೊದಲು ದಕ್ಷಿಣ ಕೊಡಗಿನ ಭಾಗ ಭತ್ತದ ಕಣಜವಾಗಿತ್ತು. ಎಲ್ಲೆಲ್ಲೂ ಗದ್ದೆಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಹಡಲು ಬಿದ್ದುಹೋಗಿವೆ. ಒಂದು ಕಡೆ ಭತ್ತದ ಕೃಷಿಗೆ ಕೂಲಿ ಕಾರ್ಮಿಕರ ಕೊರತೆ, ಬೆಂಬಲ ಬೆಲೆ ಇಲ್ಲದೇ ಇರುವುದು, ಹವಾಮಾನ ವೈಪರೀತ್ಯಗಳು ಕಾರಣವಾದರೆ ಮತ್ತೊಂದು ಕಡೆ ಕಾಡು ಪ್ರಾಣಿಗಳ ಹಾವಳಿ ತೀವ್ರವಾಗಿದೆ.

ಕೆಲವು ರೈತರು ಸಾಂಪ್ರದಾಯಿಕ ಕೃಷಿ ಕೈಬಿಡಬಾರದೆಂದು ಲಾಭದ ಉದ್ದೇಶವಲ್ಲದೇ ಹೋದರೂ ಭತ್ತದ ಕೃಷಿ ಮಾಡುತ್ತಾ ಬಂದಿದ್ದಾರೆ. ಆದರೆ ಬೆಳೆದ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿವೆ. ದಕ್ಷಿಣ ಕೊಡಗು ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕಾರಣ ಈ ಪ್ರದೇಶಗಳಿಗೆ ಕಾಡಾನೆಗಳು, ಕಾಡುಕೋಣಗಳು, ಕಾಡು ಹಂದಿಗಳು ನಿರಂತರವಾಗಿ ದಾಳಿ ಮಾಡುತ್ತಲೇ ಇರುತ್ತವೆ.

ರೈತರು ಬೆಳೆಯನ್ನು ಉಳಿಸಲು ಲಕ್ಷಾಂತರ ರೂ. ಖರ್ಚು ಮಾಡಿ ಸೋಲಾರ್ ಬೇಲಿ ಅಳವಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇತ್ತ ಅರಣ್ಯ ಇಲಾಖೆಯವರಿಂದಲೂ ಪೂರಕ ಸ್ಪಂದನೆ ದೊರಕುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಒಂದು ತೋಟದಿಂದ ಕಾಡಾನೆಗಳನ್ನು ಓಡಿಸಿದರೆ ಮತ್ತೊಂದು ಕಡೆ ಹೋಗಿ ಸೇರಿಕೊಳ್ಳುತ್ತವೆ. ರೈತರು ರಾತ್ರಿ ಕಾವಲು ಕೂತು ಆನೆಯನ್ನು ಓಡಿಸಿದರೆ ಸ್ವಲ್ಪ ದೂರ ಹೋದ ಆನೆ ಮತ್ತೆ ತಿರುಗಿ ಬಂದು ಫಸಲನ್ನು ನಷ್ಟಪಡಿಸಿ ಹೋಗುತ್ತಿವೆ.

ಇತ್ತೀಚೆಗೆ ಕುಟ್ಟ ಸಮೀಪ ಇರುವ ತೈಲ ಗ್ರಾಮದ ಪನ್ನೆ ಎಸ್ಟೇಟ್‌ನ ಮಾಲೀಕ ಪಿ.ಬಿ. ಕೇಶವದಾಸ್ ಅವರ ಭತ್ತದ ಗದ್ದೆಗೆ ದಾಳಿ ಮಾಡಿದ ಕಾಡಾನೆಗಳ ಹಿಂಡು ಭತ್ತದ ಪೈರನ್ನು ತುಳಿದು ನಾಶಪಡಿಸಿವೆ. ಈ ಮೊದಲು 40 ಎಕರೆ ಭತ್ತದ ಗದ್ದೆ ಮಾಡುತ್ತಾ ಬರುತ್ತಿದ್ದ ಇವರು ಕಾಡಾನೆಗಳ ಹಾವಳಿಯಿಂದ ಭತ್ತದ ಕೃಷಿಯಿಂದ ದೂರವಾಗುತ್ತಿದ್ದಾರೆ. ಪ್ರಸ್ತುತ ಕೇವಲ 15 ಎಕರೆ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಸೋಲಾರ್ ಬೇಲಿ ಅಳವಡಿಸಿದರೂ ಕಾಡಾನೆಗಳ ಹಾವಳಿ ನಿಲ್ಲುತ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ.

ದಕ್ಷಿಣ ಕೊಡಗು ಭತ್ತದ ಬೆಳೆಗೆ ಪೂರಕ ವಾತಾವರಣ ಹೊಂದಿದೆ. ಮೊದಲೆಲ್ಲಾ ಎಕರೆಗಟ್ಟಲೆ ಭತ್ತದ ಬೆಳೆ ಬೆಳೆಯುತ್ತಿದ್ದ ರೈತರು ಕಾಡಾನೆಗಳ ಹಾವಳಿಯಿಂದ ಭತ್ತ ಕೃಷಿಯನ್ನೇ ಕೈಬಿಟ್ಟಿದ್ದಾರೆ. ಕೆಲವೆಡೆ ಗದ್ದೆಗಳು ಕಾಫಿ, ಅಡಕೆ ತೋಟಗಳಾಗಿ ಮಾರ್ಪಟ್ಟಿದ್ದೆ ಮತ್ತು ಕೆಲವು ಕಡೆ ಹಡಲು ಬಿದ್ದಿವೆ.

ಕಾಡುಪ್ರಾಣಿಗಳಿಗೆ ಕಾಡಿನಲ್ಲಿ ಸರಿಯಾಗಿ ನೀರು ಆಹಾರ ಸಿಗದ ಕಾರಣ ಆಹಾರ ಅರಸಿ ನಾಡಿನತ್ತ ದಾಳಿ ಮಾಡುತ್ತಿವೆ. ಒಮ್ಮೆ ಸುಲಭವಾಗಿ ಆಹಾರ ಸಿಕ್ಕ ನಂತರ ಪ್ರತಿವರ್ಷವೂ ಅದನ್ನೇ ನೆಚ್ಚಿ ನಾಡಿನತ್ತ ಬರುತ್ತಿರುವುದು ಸಾಮಾನ್ಯವಾಗಿದೆ.

ಅರಣ್ಯ ಇಲಾಖೆಯಿಂದ ಮೊದಲಿಗೆ ಅರಣ್ಯ ಸುತ್ತ ಕಂದಕ ತೋಡಲಾಗಿತ್ತು. ನಂತರ ಸೋಲಾರ್ ಬೇಲಿಯನ್ನು ಅಳವಡಿಸಲಾಗಿತ್ತು. ಈಗ ರೈಲ್ವೆ ಕಂಬಿಗಳನ್ನು ಬಳಸಿ ಬೇಲಿಗಳನ್ನು ಹಾಕಲಾಗುತ್ತಿದೆ.

ಆದರೂ ನಿರ್ವಹಣೆಯ ಕೊರತೆಯಿಂದ ಕಾಡು ಪ್ರಾಣಿಗಳು ನಾಡಿನತ್ತ ಬರುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕೆಲವು ಕಡೆ ಅರಣ್ಯದ ಒಳಗೆ ವಾಸಿಸುವ ಜನರು ರಾತ್ರಿ ಹೊತ್ತು ಅರಣ್ಯದ ಗೇಟ್ ಮುಚ್ಚದೇ ಇದ್ದಾಗಲೂ ಕಾಡಾನೆಗಳು ನಾಡಿನತ್ತ ಬರುತ್ತಿವೆ.

ಕಾಡು ಪ್ರಾಣಿಗಳಿಂದ ಫಸಲು ನಷ್ಟವಾದರೆ ಸರಕಾರದ ಕಡೆಯಿಂದ ಸಿಗುವ ಸವಲತ್ತುಗಳು ಕೂಡ ಅಲ್ಪ ಪ್ರಮಾಣದ್ದೇ. ಅದಕ್ಕೆ ಹತ್ತೆಂಟು ದಾಖಲಾತಿಗಳನ್ನು ಒದಗಿಸಲಾಗದೇ ರೈತರು ಹೈರಾಣಾಗಿದ್ದಾರೆ. ಒಟ್ಟಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಸಮೃದ್ಧವಾಗಿದ್ದ ಭತ್ತದ ಕಣಜ ಇಂದು ಬರಿದಾಗಿದೆ. ಇನ್ನಾದರೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತುಕೊಂಡರೆ ಮತ್ತೆ ಭತ್ತದ ಗದ್ದೆಗಳನ್ನು ಕಾಣಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net