

ಕಳಸ: ಕಾಡುಕೋಣಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿ ಸರ್ವಪಕ್ಷಗಳೂ ಸೇರಿ ರೈತರು ಹಾಗೂ ಸಂಘಟನೆಗಳಿಂದ ಶುಕ್ರವಾರ ಕಳಸ ಬಂದ್ ಮಾಡಿ ಒತ್ತಾಯಿಸಲಾಯಿತು.
ಗುರುವಾರ ಕಳಸದ ಲಲಿತಾದ್ರಿ ಎಂಬಲ್ಲಿ ರಘುಪತಿ ಹೆಬ್ಬಾರ್ ಅವರು ಕಾಡುಕೋಣದ ದಾಳಿಗೆ ಕಾಫಿತೋಟದಲ್ಲಿ ಮೃತಪಟ್ಟಿದ್ದರು. ಐದು ವರ್ಷಗಳಿಂದ ತಾಲೂಕಿನಾದ್ಯಂತ ಕಾಡುಕೋಣಗಳ ಹಾವಳಿಗೆ ಸಾಕಷ್ಟು ಸಾವು-ನೋವು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಸರ್ವಪಕ್ಷಗಳಿಂದ ಕಳಸ ಬಂದ್‌ಗೆ ಕರೆ ನೀಡಲಾಗಿತ್ತು.
ಬಂದ್ ನಿಮಿತ್ತ ಪಟ್ಟಣದಲ್ಲಿ ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬೆಳಗ್ಗೆ ಕಳಸ ಕಲಶೇಶ್ವರ ದೇವಸ್ಥಾನದ ಬಳಿಯಿಂದ ಸರ್ವಪಕ್ಷಗಳ ಮುಖಂಡರು, ರೈತರು, ಸಂಘಟನೆಗಳ ಮುಖಂಡರು ಸೇರಿ ಪ್ರತಿಭಟಣಾ ಮೆರವಣಿಗೆ ನಡೆಸಿದರು. ಕಳಸ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಶಾರದಾ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಕಳಸ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಕಳಸ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ಎಲ್ಲ್ಲ ರೈತರೂ ಸೇರಿ ಕಾಡುಕೋಣಗಳಿಗೆ ಗುಂಡು ಹೊಡೆದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಜನರನ್ನು ಉಳಿಸಿಕೊಳ್ಳಬೇಕೆಂದರೆ ನಾವು ಜೈಲಿಗೆ ಹೋಗಲು ಸಿದ್ಧರಿರಬೇಕು. ನಾವು ಎಲ್ಲರೂ ಈ ತೀರ್ಮಾನ ಮಾಡಬೇಕು. ಇದನ್ನು ಮಾಡದೆ ಹೋದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಎಚ್ಚೆತ್ತುಕೊಳ್ಳಲ್ಲ. ಬೀದಿ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಕಾಡುಕೋಣಗಳ ಹಾವಳಿ ಇದೇ ರೀತಿ ಮುಂದುವರಿದರೆ ಊರಲ್ಲಿ ರೈತರು ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆನೆ ಕಾರಿಡಾರ್ ಮಾಡಿದಂತೆ ಕುದುರೆಮುಖದಲ್ಲಿ ಕಾಡುಕೋಣ ಕಾರಿಡಾರ್ ಮಾಡಿ ಅಲ್ಲಿ ಈ ಭಾಗದ ಕಾಡುಕೋಣಗಳನ್ನು ಸ್ಥಳಾಂತರ ಮಾಡಿ. ನಮಗೆ ಪ್ರಾಣಿಗಳಿಂದ ಆಪತ್ತು ಎದುರಾದಾಗ ಪ್ರಾಣಿಗಳಿಗೆ ಗುಂಡು ಹೊಡೆಯಲು ರೈತರಿಗೆ ಅವಕಾಶ ಕೊಡಿ ಎಂದು ಹೇಳಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್, ಜೆಡಿಎಸ್ ಅಧ್ಯಕ್ಷ ಸಂತೋಷ್ ಹಿನಾರಿ, ಸಿಪಿಐ ಕಳಸ ತಾಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ, ಕನ್ನಡ ಸಂಘದ ಅಧ್ಯಕ್ಷ ರಾಜು, ಮುಖಂಡರಾದ ಜ್ವಾಲನಯ್ಯ, ನಾಗಭೂಷಣ್, ಲಕ್ಷ್ಮಣಾಚಾರ್, ವೆಂಕಟಸುಬ್ಬಯ್ಯ, ಕೇಶವ ಗೌಡ, ಅಂಬರೀಶ್ ಭಟ್, ರಜಿತ್ ಕೆಳಗೂರು, ಬಿ.ಕೆ.ಮಹೇಶ್, ಸುಂದರ ಶೆಟ್ಟಿ, ಕೆ.ಸಿ.ಮಹೇಶ್, ಆಶಾಲತಾ ಜೈನ್, ಉಷಾ ವಿಶ್ವನಾಥ್, ಮಮ್ತಾಜ್ ಬೇಗಂ ಇತರರಿದ್ದರು.