

ಕೊಳ್ಳೇಗಾಲ: ನಾಡನ್ನು ಹಸಿರಾಗಿ ಮಾಡುವುದೇ ನಮ್ಮ ಆದ್ಯ ಕರ್ತವ್ಯ, ಕಾಡನ್ನು ಉಳಿಸದೆ ವಿನಃ, ನಾವು ನಾಡಿನಲ್ಲಿ ಆರೋಗ್ಯವತರಾಗಿ ಬದುಕಲು ಸಾಧ್ಯವಿಲ್ಲ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಶ್ರೀ ಮಹದೇಶ್ವರ ಮರಡಿಗುಡ್ಡ ವೃಕ್ಷವನದಲ್ಲಿ ಭಾನುವಾರ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ, ಸಾಮಾಜಿಕ ಅರಣ್ಯ ವಿಭಾಗ ಆಯೋಜಿಸಿದ್ದ ವನಮಹೋತ್ಸವ (ಕೋಟಿ ವೃಕ್ಷಾಂದೋಲನ) ಕಾರ್ಯಕ್ರಮದಲ್ಲಿ ಮಾತನಾಡಿ, ಉಸಿರಿಲ್ಲದೆ ಜೀವಿಸಲು ಸಾಧ್ಯವಿಲ್ಲ. ಗಿಡ, ಮರಗಳು ಉಸಿರಿನ ಕೇಂದ್ರಗಳು ಎಂಬ ಅರಿವು ಪ್ರತಿಯೊಬ್ಬರಿಗಿರಬೇಕು. ಮನೆಗೊಂದು ಗಿಡವನ್ನು ನೆಡುವ ಸಂಕಲ್ಪ ಮಾಡಬೇಕು. ನಮ್ಮ ತಂದೆ ಬಿ.ರಾಚಯ್ಯ ಅವರು ಅರಣ್ಯ ಹಾಗೂ ಕಂದಾಯ ಸಚಿವರಾಗಿದ್ದ ವೇಳೆ ಪರಿಸರ ಸಂರಕ್ಷಣೆಗಾಗಿ ಬಹಳಷ್ಟು ಕಾರ್ಯಕ್ರಮ ರೂಪಿಸಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ರೈತರಿಗೆ ಸಾಗುವಳಿ ಮಾಡಲು ಅರಣ್ಯ ವ್ಯಾಪ್ತಿಯ ಜಾಗವನ್ನು ಕಂದಾಯ ಇಲಾಖೆಗೆ ಮಾರ್ಪಡಿಸಿ ನೆರವಾಗಿದ್ದರು.
ನಮ್ಮ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ. ಮೂರು ಹುಲಿ ಸಂರಕ್ಷಿತ ಪ್ರದೇಶಗಳಿದೆ. ದಟ್ಟವಾದ ಮರ-ಗಿಡಗಳಿವೆ. ಇವೆಲ್ಲವನ್ನು ನಾವು ಉಳಿಸಬೇಕು. ಅರಣ್ಯ ಇಲಾಖೆಯೊಂದಿಗೆ ಜನರು ಕೈ ಜೋಡಿಸಿ ಪರಿಸರ ಉಳಿಸಬೇಕಿದೆ. ಕೊಳ್ಳೇಗಾಲ ಮರಡಿಗುಡ್ಡವನ್ನು ಅರಣ್ಯ ಅಧಿಕಾರಿಗಳು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಕುಮಾರ್ ಮಾತನಾಡಿ, ಉಚಿತವಾಗಿ ಸಿಗುವ ಗಾಳಿ, ನೀರು, ಮಣ್ಣು ಸಂರಕ್ಷಣೆ ಕಾಳಜಿ ವಹಿಸುವುದಿಲ್ಲ. ಕಾಲಕ್ರಮೇಣ ಇದರಿಂದ ಆಗುವ ದುಷ್ಪರಿಣಾಮ ಎದುರಿಸ ಬೇಕಾಗುತ್ತದೆ. ಈಗಾಗಲೇ ಕುಡಿಯುವ ನೀರಿಗೆ ಹಣ ತೆರುವ ಪರಿಸ್ಥಿತಿಗೆ ಬಂದಿದ್ದೇವೆ. ಕೋವಿಡ್ ವೇಳೆ ಆಕ್ಸಿಜನ್ ಮಹತ್ವ ತಿಳಿಸಿದೆ. ಇವೆಲ್ಲವನ್ನು ತಿಳಿದು ಅರಣ್ಯ ಸಂರಕ್ಷಣೆ ಹಾಗೂ ಗಿಡ-ಮರಗಳ ಪೋಷಣೆಗೆ ಹೆಚ್ಚು ಒತ್ತು ನೀಡಬೇಕಿದೆ. ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆ ನೀಡಬೇಕೆಂದರೆ ಅದುವೆ ಉತ್ತರ ಪರಿಸರ ಮಾತ್ರ ಎಂದರು.
ಇದಕ್ಕೂ ಮೊದಲು ಶಾಸಕರು ಮರಡಿಗುಡ್ಡ ವೃಕ್ಷವನದಲ್ಲಿ ಗಿಡ ನೆಟ್ಟು ನಿರೇರೆದರು. ಶಾಲಾ ಮಕ್ಕಳಿಗೆ ವಿತರಣೆ ಮಾಡಿ ಮನೆಯ ಅಂಗಳದಲ್ಲಿ ನೆಟ್ಟು ಪೋಷಿಸುವಂತೆ ಸಲಹೆ ನೀಡಿದರು. ಬಿ.ಆರ್.ಟಿ. ವಲಯ ಅರಣ್ಯಾಧಿಕಾರಿ ವಾಸು ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಭೋದಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ಶಶಿಧರ್, ವಲಯ ಅರಣ್ಯಾಧಿಕಾರಿ ಭರತ್, ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಧಿಕಾರಿ ಪ್ರಪುಲ್, ಪ್ರವೀಣ್ ಮತ್ತಿತರರು ಇದ್ದರು.