ಕಾಡು ಉಳಿಸಿ-ಬೆಳೆಸಲು ಶ್ರಮಿಸಿ

11 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಹೆಚ್ಚಾಗಿ ಉಳಿದಿರುವುದು ಗ್ರಾಮೀಣ ಭಾಗದಲ್ಲೇ. ಕೃಷಿ ಮೇಳದಲ್ಲಿ ಕನ್ನಡ ಗೋಷ್ಠಿಗೆ ಆದ್ಯತೆ ನೀಡಿರುವುದು ಸಮಂಜಸವಾಗಿದೆ ಎಂದು ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಕೃವಿವಿ ಆವರಣದಲ್ಲಿನ ಕೃಷಿ ಮೇಳದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಕೃಷಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು. ಜನಸಂಖ್ಯೆ ಹೆಚ್ಚಳದಿಂದ ಕಾಡು ನಾಶ ಆಗುತ್ತಿರುವುದು ಭಾರತದಲ್ಲಿನ ಸಮಸ್ಯೆ. ಮಣ್ಣು ಸವಕಳಿ ತಡೆಯಲು ಹುಲ್ಲು ಬೆಳೆಸಬೇಕು. ಮಳೆನೀರು ಕೊಯ್ಲು ಹಾಗೂ ಇತರ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ನಾವು ದುಡ್ಡಿನಿಂದ ಶ್ರೀಮಂತರಾಗದೆ, ಕಾಡು ಬೆಳೆಸುವುದರಿಂದ ಶ್ರೀಮಂತರಾಗಬೇಕು ಎಂದರು.
ಸಿ.ಯು. ಬೆಳ್ಳಕ್ಕಿ ಮಾತನಾಡಿ, ಕೃಷಿಯಿಂದಲೇ ಆಹಾರ. ಹೀಗಾಗಿ ನಮ್ಮ ಜೀವನಕ್ಕೆ ಕೃಷಿ ಪಾತ್ರ ದೊಡ್ಡದು. ಕೃಷಿಯಲ್ಲಿ ಬಹಳಷ್ಟು ಲೇಖನ ಬಂದಿವೆ. ಮಣ್ಣು ಮತ್ತು ನೀರು ಪರೀಕ್ಷೆ ದೊಡ್ಡ ಮಟ್ಟದಲ್ಲಿ ನಡೆಯಬೇಕು. ಮಣ್ಣು ಆಧಾರಿತ ಕೃಷಿ ಅಗತ್ಯವಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸುವ ಕ್ರಮಗಳನ್ನು ಪಾಲಿಸಬೇಕು. ಇದರಿಂದಲೇ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.
ಕೃಷಿಯಲ್ಲಿ ಕನ್ನಡ ಲೇಖನ ಎಂಬ ಸ್ಪರ್ಧೆಯಲ್ಲಿ ಆಯ್ಕೆಯಾದ, ಡಾ. ವೆಂಕಟ್ರಮಣ ಹೆಗಡೆ ಅವರ ರಸಗೊಬ್ಬರ ಬಳಸಿದರೆ ಮಣ್ಣು ಹಾಳಾಗುತ್ತಾ? ಲೇಖನಕ್ಕೆ ಚನ್ನವೀರ ಕಣವಿ ಉತ್ತಮ ಕೃಷಿ ಲೇಖನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಎಸ್. ಏಣಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net