ಕಾಡಿನಲ್ಲಿ ಎರಡು ಹಂತದ ತಪಾಸಣೆ ಮಾಡಿ: ಈಶ್ವರ ಬಿ. ಖಂಡ್ರೆ ಸೂಚನೆ

ishwar khandre
Published on

ಮೈಸೂರು: ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ತರುವ ಪ್ಲಾಸ್ಟಿಕ್ ತ್ಯಾಜ್ಯ ಅರಣ್ಯ ಪ್ರವೇಶಿಸದಂತೆ ತಡೆಯಲು ಎರಡು ಹಂತದ ತಪಾಸಣೆ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಭಾನುವಾರ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಾಗರಹೊಳೆ, ಮೇಟಿಕುಪ್ಪೆ, ಕಲಹಳ್ಳ ಮತ್ತು ವೀರನಹೊಸಹಳ್ಳಿ ವಲಯಗಳ ಚೆಕ್‌ಪೋಸ್ಟ್‌ಗಳಲ್ಲಿ ಬೃಹತ್ ಗಾತ್ರದ ತ್ಯಾಜ್ಯ ಬುಟ್ಟಿಗಳನ್ನು ಇಡಲಾಗಿದ್ದು, ಪ್ರತಿ ಕಸದ ಬುಟ್ಟಿಗಳಲ್ಲಿ ನಿತ್ಯ 5ರಿಂದ 6 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತದೆ.

ಜತೆಗೆ ಸಿಬ್ಬಂದಿ ಅರಣ್ಯದೊಳಗೆ ಹೋಗಿ ತ್ಯಾಜ್ಯ ಸಂಗ್ರಹಿಸಿ ತರುತ್ತಾರೆ. ಅದರ ಬದಲು ಪ್ರವೇಶದಲ್ಲೇ ಎರಡು ಹಂತದ ತಪಾಸಣೆ ಮಾಡಬೇಕು ಎಂದರು.

ಅರಣ್ಯದೊಳಗೆ ಹಾದು ಹೋಗುವ ಹೆದ್ದಾರಿ, ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಎರಡು ಹಂತ ತಪಾಸಣೆ ವ್ಯವಸ್ಥೆ ಅನುಷ್ಠಾನ ಮಾಡಿ, ಮೊದಲ ಹಂತದಲ್ಲಿ ಒಂದು ದೊಡ್ಡ ಬುಟ್ಟಿ ಇಟ್ಟು ಏಕ ಬಳಕೆ ಪ್ಲಾಸ್ಟಿಕ್ ಬಾಟಲಿ, ಲೋಟ, ತಟ್ಟೆ, ಕ್ಯಾರಿ ಬ್ಯಾಗ್ ಅನ್ನು ಅದರಲ್ಲಿ ಸ್ವಯಂ ಪ್ರೇರಿತವಾಗಿ ಹಾಕಲು ವಾಹನದಲ್ಲಿರುವವರಿಗೆ ತಿಳಿಸಬೇಕು. ನಂತರ ಎರಡನೇ ಹಂತದಲ್ಲಿ ವಾಹನ ತಪಾಸಣೆ ಮಾಡಿ, ವಾಹನಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಇದ್ದರೆ ದಂಡ ವಿಧಿಸಬೇಕು ಎಂದು ಸೂಚಿಸಿದರು.

ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಚಿವರು, ಚಿರತೆಗಳು, ಆನೆಗಳೂ ಕಾಡಿನಿಂದ ಹೊರಬರುತ್ತಿವೆ. ಈ ನಿಟ್ಟಿನಲ್ಲಿ ಅರಣ್ಯದೊಳಗೆ ನೀರು ಮತ್ತು ಆಹಾರದ ಕೊರತೆ ಆಗದಂತೆ ಯೋಜನೆ ರೂಪಿಸಬೇಕು.

ರಂಗನತಿಟ್ಟು ಪಕ್ಷಿಧಾಮದಲ್ಲಿ ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಜಾರಿ ಮಾಡುವಂತೆಯೂ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net