

ಗದಗ: ಜಿಲ್ಲೆಯ ಪ್ರವಾಸಿ ತಾಣ ಎನಿಸಿರುವ ಬಿಂಕದಕಟ್ಟಿ ಕಿರು ಮೃಗಾಲಯವು ಈಗಾಗಲೇ ಎರಡು ಹುಲಿಗಳ ಆವಾಸಸ್ಥಾನವಾಗಿದೆ. ಇದರ ಜತೆಗೆ ಇದೀಗ ಎರಡು ಸಿಂಹಗಳನ್ನು ತರಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಮೃಗಾಲಯದಲ್ಲಿ ಸಿಂಹಗಳ ಗರ್ಜನೆ ಕೇಳಲಿದೆ.
ಸಿಂಹಗಳ ಚಲನವಲನಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗಾಜಿನ ಪಂಜರ ನಿರ್ವಿುಸಲಾಗುತ್ತಿದೆ. 3 ಮೀಟರ್ ಅಗಲ, 6 ಮೀಟರ್ ಎತ್ತರ, 12 ಎಂಎಂ ದಪ್ಪ ಗಾತ್ರದ 2 ಲೇಯರ್ ಗ್ಲಾಸ್ ಅಳವಡಿಸಲಾಗುತ್ತಿದೆ. ಸಿಂಹಗಳ ಪಂಜರದ ಜತೆಗೆ ಚಿರತೆಗಳ ಪಂಜರಕ್ಕೂ ಗಾಜು ಅಳವಡಿಸಲಾಗುತ್ತಿದೆ. ಸಿಂಹ ವಾಸಿಸುವ ಕೊಠಡಿಯ ಮೂರು ಕಡೆ ಗೋಡೆ ಇರುತ್ತದೆ. ಒಂದು ಕಡೆ ಮಾತ್ರ ಗಾಜು ಅಳವಡಿಸಲಾಗಿರುತ್ತದೆ. ಆ ಗಾಜಿನಿಂದ ನೋಡಿದರೆ ಸಿಂಹದ ಚಲನವಲನಗಳ ಸ್ಪಷ್ಟ ವೀಕ್ಷಣೆ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಪೈಕಿ ಈಗಾಗಲೇ ಹೈನಾಗಳ ಪಂಜರಕ್ಕೆ ಪಾರದರ್ಶಕ ಗಾಜುಗಳನ್ನು ಅಳವಡಿಸಲಾಗಿದೆ.
ಎರಡು ಸಿಂಹಗಳನ್ನು ಹೊಂದಲು ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ. ಎರಡು ಸಿಂಹಗಳನ್ನು ಒದಗಿಸುವಂತೆ ಕೋರಿ ಕೆಲ ತಿಂಗಳುಗಳ ಹಿಂದೆಯೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಪತ್ರ ಬರೆಯಲಾಗಿದೆ. ಬನ್ನೇರುಘಟ್ಟ ಮೃಗಾಲಯಕ್ಕೂ ಭೇಟಿ ನೀಡಿ ಎರಡು ಸಿಂಹಗಳನ್ನು ಗುರುತಿಸಲಾಗಿದೆ. ಮೈಸೂರು ಇಲ್ಲವೇ ಬನ್ನೇರುಘಟ್ಟ ಮೃಗಾಲಯದಿಂದ ಸಿಂಹಗಳು ಬರಲಿವೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ ನಿರೀಕ್ಷೆ: ಕಳೆದ ವರ್ಷ ಎರಡು ಹುಲಿಗಳನ್ನು ತಂದಿದ್ದರಿಂದ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿ, ಆದಾಯವೂ ಹೆಚ್ಚಾಗಿದೆ. ಇದೀಗ ಸಿಂಹಗಳನ್ನು ತಂದರೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಸದ್ಯ ಪ್ರತಿನಿತ್ಯ 100 ರಿಂದ 130, ವಾರಾಂತ್ಯದ ದಿನಗಳಲ್ಲಿ 250 ರಿಂದ 400 ಜನರು ಭೇಟಿ ನೀಡುತ್ತಿದ್ದಾರೆ. ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬಗಳ ದಿನ ಪ್ರವಾಸಿಗರ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ.
ಮೃಗಾಲಯದ ಪ್ರಾಣಿಗಳು: ಬಿಂಕದಕಟ್ಟಿ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಇದೀಗ 2 ಹುಲಿ, 5 ಚಿರತೆ, 7 ಏಮು, ಪುನುಗು ಬೆಕ್ಕು, ಕಾಡುಬೆಕ್ಕು, 2 ಕರಡಿ, 7 ಮೊಸಳೆ, 3 ಹೆಬ್ಬಾವು, 14 ನೀಲಗಾಯಿ, 12 ಕಡವಿ (ಸಾಂಬಾರ), 44 ಕೃಷ್ಣಮೃಗ, 33 ಜಿಂಕೆ, 4ನರಿ, 2 ಗೋಲ್ಡನ್ ಫಿಸೆಂಟ್, 8 ಜಂಗಲ್ ಫೌಳ್ (ಕೋಳಿ), ರಿಂಗ್ ನೆಕ್ ಫಿಸೆಂಟ್ ಒಂದು, 7 ಸಿಲ್ವರ್ ಫಿಸೆಂಟ್ ಸೇರಿ 175 ವಿವಿಧ ತಳಿಯ ಪ್ರಾಣಿ-ಪಕ್ಷಿಗಳಿವೆ.
ಇನ್ನೆರಡು ತಿಂಗಳಲ್ಲಿ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಸಿಂಹಗಳು ಬರಲಿವೆ. ಇಷ್ಟೊತ್ತಿಗೆ ಬರಬೇಕಿತ್ತು. ಆದರೆ, ಕರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ಘೊಷಣೆ ಆಗಿದ್ದರಿಂದ ತಡವಾಗಿದೆ. ಮುಂಬರುವ ದಿನಗಳಲ್ಲಿ ಮೃಗಾಲಯದಲ್ಲಿನ ಎಲ್ಲ ಪಂಜರಗಳನ್ನು ಗಾಜಿನ ಪಂಜರಗಳಾಗಿ ಪರಿವರ್ತಿಸಲಾಗುವುದು. | ಸೂರ್ಯಸೇನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ