ಕಾಡಿನ ಮಧ್ಯೆ ವೈದ್ಯಕೀಯ ತ್ಯಾಜ್ಯ ರಾಶಿ ; ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಆತಂಕದ ವಾತಾವರಣ

07Tmk_Medical_Waste
Published on

ತುಮಕೂರು : ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯ ಸುರಿದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಡಯಾಗ್ನಾಸ್ಟಿಕ್ ಸೆಂಟರ್ ಹಾಗೂ ಕ್ಲಿನಿಕ್ ಒಂದಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.

ನಾಮದ ಚಿಲುಮೆ ರಸ್ತೆಯ ಮಾರ್ಗಮಧ್ಯೆ ಕಾಡಿನಲ್ಲಿ 3-4 ಬಾಕ್ಸ್‌ನಷ್ಟು ವೈದ್ಯಕೀಯ ತ್ಯಾಜ್ಯ ಸುರಿದಿದ್ದು ಪರಿಸರವಾದಿಗಳು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕರೊನಾ ಸಂದರ್ಭದಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಈ ರೀತಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದು ವನಪಾಲಕರಿಗೂ, ವಿಹಾರಕ್ಕೆ ತೆರಳುವವರಿಗೂ ತೊಂದರೆ ಆಗುವ ಸಾಧ್ಯತೆ ಇದೆ. ಕಾಡಿನಲ್ಲಿ ಎಸೆದಿದ್ದ ತ್ಯಾಜ್ಯಗಳ ಬಾಕ್ಸ್‌ಗಳ ಫೋಟೋಗಳನ್ನು ತೆಗೆದು ಪರಿಸರವಾದಿ ಮಲ್ಲಿಕಾರ್ಜುನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ತಕ್ಷಣವೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ.

ನೋಟಿಸ್ ಜಾರಿ: ವೈದ್ಯಕೀಯ ತ್ಯಾಜ್ಯಗಳ ಜತೆಗೆ ಕ್ಲಿನಿಕ್ ಹಾಗೂ ಡಯಾಗ್ನಾಸ್ಟಿಕ್‌ನ ಚೀಟಿ ಇದ್ದು ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಕ್ಯಾತಸಂದ್ರದ ಈಶ್ವರ ಡಯೊಗ್ನಾಸ್ಟಿಕ್ ಹಾಗೂ ಬಡ್ಡಿಹಳ್ಳಿಯ ಮಂಜುನಾಥ ಕ್ಲಿನಿಕ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಕೋತಿಗಳು, ಲಂಗೂರುಗಳು(ಮುಸುವ) ಕಾಡಿನಲ್ಲಿ ಓಡಾಡುತ್ತಿರುವಾಗ ಈ ಬಾಕ್ಸ್‌ನಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ಮುಟ್ಟುವ ಸಾಧ್ಯತೆ ಇದ್ದು, ಅವುಗಳಿಗೆ ಅಪಾಯವಾಗಲಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ನಿರ್ಲಕ್ಷೃ ವಹಿಸಿರುವುದು ಬೇಸರದ ಸಂಗತಿ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಮಲ್ಲಿಕಾರ್ಜುನ್, ಪರಿಸರವಾದಿ ಅರಣ್ಯ ಪ್ರದೇಶದಲ್ಲಿ ವೈದ್ಯಕೀಯ ತ್ಯಾಜ್ಯ ಎಸೆದಿದ್ದು ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಪಾಯಕಾರಿ ತ್ಯಾಜ್ಯ ಎಸೆದಿರುವ ಕ್ಲಿನಿಕ್, ಡಯಾಗ್ನಾಸ್ಟಿಕ್ ಸೆಂಟರ್‌ಗೆ ನೋಟಿಸ್ ನೀಡಲಾಗಿದೆ. ಎಚ್.ಸಿ.ಗಿರೀಶ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net