

ಕೊಪ್ಪ: ಮರಿತೊಟ್ಟಲು ಗ್ರಾಮ ಪಂಚಾಯಿತಿ ತನುಡಿ ಗ್ರಾಮದ ತೋಟದಕೊಪ್ಪ ಎಂಬಲ್ಲಿ ಕಾಡಾನೆ ಸೋಮವಾರ ರಾತ್ರಿ ತೋಟ, ಗದ್ದೆಗಳಿಗೆ ನುಗ್ಗಿ ಬಾಳೆ, ಅಡಕೆ, ಕಾಫಿ ಬೆಳೆಗಳನ್ನು ಧ್ವಂಸಗೊಳಿಸಿದೆ.
ತೋಟದಕೊಪ್ಪದ ಕೃಷಿಕರಾದ ಜಯಂತ್ ಪೂಜಾರಿ, ಉಮೇಶ್, ಕೇಶವ್ ಗೌಡ, ಹರೀಶ, ದಾಮೋದರ್ ಶೆಟ್ಟಿ, ನಸೀರ್ ಎಂಬುವವರ ತೋಟಗಳಿಗೆ ಕಾಡಾನೆ ನುಗ್ಗಿ ಹಾನಿ ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
ಕೃಷಿಕ ದಾಮೋದರ್ ಶೆಟ್ಟಿ ವಿಜಯವಾಣಿಯೊಂದಿಗೆ ಮಾತನಾಡಿ, ನಿರಂತರವಾಗಿ ತೋಟಗಳಿಗೆ ಆನೆ ದಾಳಿ ಮಾಡುತ್ತಿದೆ. ಇದರಿಂದ ಅಡಕೆ, ಬಾಳೆ ಗಿಡಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಸೆರೆ ಹಿಡಿಯಬೇಕು ಹಾಗೂ ಬೆಳೆ ನಾಶಕ್ಕೆ ಪರಿಹಾರ ಒದಗಿಸಿಬೇಕು ಎಂದು ಒತ್ತಾಯಿಸಿದರು.