ಕಾಡಾನೆಗಳಿಗೆ ಕರೆಂಟ್ ಶಾಕ್

17Rajesh5
Published on

ಚಾಮರಾಜನಗರ: ಕಾಡಿನಿಂದ ನಾಡಿಗೆ ಬಂದು ಆಹಾರ ಅರಸಿ ಜಮೀನುಗಳಿಗೆ ಲಗ್ಗೆ ಇಡುವ ಆನೆಗಳ ಪಾಲಿಗೆ ಅಕ್ರಮ ವಿದ್ಯುತ್ ಉರುಳಾಗಿ ಪರಿಣಮಿಸುತ್ತಿದೆ.

ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮಗಳಿವೆ. ಈ ಕಾಡುಗಳ ಅಂಚಿನಲ್ಲಿರುವ ಜಮೀನುಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಮನೆ ಮಾಡಿದೆ. ಅರಣ್ಯದಿಂದ ನಾಡಿಗೆ ಬರುವ ಪ್ರಾಣಿಗಳಿಂದ ಪ್ರಾಣ, ಆಸ್ತಿ ಹಾನಿಗಳಾಗುತ್ತಿವೆ. ಈ ಸಂದರ್ಭದಲ್ಲಿ ಪ್ರಾಣಿಗಳೂ ಸಹ ಜೀವ ಕಳೆದುಕೊಳ್ಳುತ್ತಿವೆ. ಇದರಲ್ಲಿ ಕಾಡಾನೆಗಳ ಅವನತಿಯೂ ಪ್ರಧಾನವಾಗಿದ್ದು, ಅಕ್ರಮವಾಗಿ ಜಮೀನಿನ ಬೇಲಿಗೆ ಹರಿಸಿದ ವಿದ್ಯುತ್ ಸ್ಪರ್ಶದಿಂದ ಆನೆಗಳು ಮೃತಪಡುತ್ತಿವೆ.

ಕಾಡಾನೆಗಳಿಗೆ ವಿದ್ಯುತ್ ಉರುಳು: ಜಮೀನುಗಳ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡುತ್ತಿರುವುದರಿಂದ ಆನೆಗಳು ಸಾಯುತ್ತಿವೆ. 2024ರಲ್ಲಿ ಕಾವೇರಿ ವನ್ಯಜೀವಿ ವಿಭಾಗದ ಕೊತ್ತನೂರಿನಲ್ಲಿ ಗಂಡಾನೆ ಮೃತಪಟ್ಟಿತ್ತು. ರಾಮನಗರದ ಸಂಗಮದಲ್ಲಿ ಗಂಡಾನೆ ವಿದ್ಯುತ್ ಸ್ಪರ್ಶದಿಂದ ಸತ್ತಿತ್ತು. ಇತ್ತೀಚಿಗೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಓಂಕಾರ್ ವಲಯದ ಕಾಡಿನಿಂದ ಆಹಾರ ಅರಸಿ ಹೊರಗೆ ಬಂದಿದ್ದ 10 ವರ್ಷದ ಗಂಡಾನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿತು. ಜಿಲ್ಲೆಯ ಕಾಡುಗಳಲ್ಲಿ ಕಾಡಾನೆಗಳೂ ಅಧಿಕ ಸಂಖ್ಯೆಯಲ್ಲಿವೆ. 2023ರ ಆನೆ ಗಣತಿ ವರದಿ ಪ್ರಕಾರ, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ 1116 ಆನೆಗಳಿವೆ. ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ 619, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 706, ಕಾವೇರಿ ವನ್ಯಜೀವಿಧಾಮದಲ್ಲಿ 236 ಆನೆಗಳಿವೆ. ಕಾಡಿನಲ್ಲಿ ಆಹಾರ ಸಿಗದ ಸಂದರ್ಭದಲ್ಲಿ ಆನೆಗಳು ನಾಡಿಗೆ ಧಾವಿಸುತ್ತವೆ. ಇದನ್ನು ತಪ್ಪಿಸಲು ಅರಣ್ಯ ಇಲಾಖೆ ಸೋಲಾರ್ ಬೇಲಿ, ಕಂದಕ ನಿರ್ಮಾಣ ಮಾಡಿದರೂ ಕೆಲವು ಕಡೆ ಆನೆಗಳ ಉಪಟಳ ನಿಲ್ಲುವುದಿಲ್ಲ. ಬೇಸತ್ತ ರೈತರು ಜಮೀನಿನ ತಂತಿ ಬೇಲಿಗೆ ಅಕ್ರವಾಗಿ ವಿದ್ಯುತ್ ಸಂಪರ್ಕ ನೀಡುವುದರಿಂದ ಆನೆಗಳು ಸಾಯುತ್ತಿವೆ.

ಹೀಗೇಕೆ ಮಾಡ್ತಾರೆ?:

ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಕೃಷಿ ಕಾಯಕ ಸವಾಲುಗಳಿಂದ ಕೂಡಿದೆ. ಅರಣ್ಯದಿಂದ ನಾಡಿಗೆ ಬರುವ ಕಾಡುಪ್ರಾಣಿಗಳು ಜಮೀನುಗಳಿಗೆ ನುಗ್ಗಿ ಬೆಳೆಯನ್ನು ತಿಂದು ಹಾಕುತ್ತಿವೆ. ಇದರಲ್ಲಿ ಕಾಡುಹಂದಿಗಳ ಪಾತ್ರ ಸಿಂಹಪಾಲು. ಬೆಳೆ ನಾಶಕ್ಕೆ ಮಾತ್ರ ಪರಿಹಾರ ದೊರೆಯಲ್ಲ. ಹೀಗಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡುಹಂದಿಗಳಿಗೆ ಆಹಾರವಾಗಿಸುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕಾಗಿ ಕೆಲವು ರೈತರು ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬದಿಂದ ವೈರ್ ಎಳೆದು ತಂತಿ ಬೇಲಿಗೆ ಸಂಪರ್ಕ ನೀಡುತ್ತಾರೆ. ಆಹಾರ ಅರಸಿ ನಾಡಿಗೆ ಬರುವ ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಡುತ್ತಿವೆ. ಆದರೆ ಕಾಡುಹಂದಿಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದು ವರದಿಗಳಾಗಿರುವುದು ತೀರಾ ಕಡಿಮೆ. ಆನೆಗಳ ಸಾವಿನ ಕಾರಣವಾಗುವ ರೈತರ ವಿರುದ್ಧ ಅರಣ್ಯ ಇಲಾಖೆ ಕಾನೂನು ಕ್ರಮ ಜರುಗುತ್ತದೆ.

ಅಕ್ರಮ ವಿದ್ಯುತ್ ಬದಲು ಸೋಲಾರ್ ಹಾಕ್ಸಿ:

ಅರಣ್ಯದಂಚಿನಲ್ಲಿರುವ ಜಮೀನುಗಳಿಗೆ ಸೋಲಾರ್ ತಂತಿ ಬೇಲಿ ಹಾಕಿಸಿಕೊಳ್ಳಲು ಅರಣ್ಯ ಇಲಾಖೆ ನೆರವು ನೀಡುತ್ತದೆ. ಅರಣ್ಯ ಇಲಾಖೆಗೆ ಅರ್ಜಿ ಹಾಕಿ ಸೋಲಾರ್ ತಂಬಿ ಬೇಲಿ ಹಾಕಿಸಿಕೊಳ್ಳಬಹುದು. ಆರ್ಧದಷ್ಟು ಹಣವನ್ನು ಅರಣ್ಯ ಇಲಾಖೆ ನೀಡುತ್ತದೆ. ಈ ಸೌಲಭ್ಯವನ್ನು ಪಡೆದುಕೊಂಡು ತಂಬಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂರ್ಪಕ ನೀಡುವ ಬದಲು ಸೋಲಾರ್ ಅಳವಡಿಸಿಕೊಳ್ಳುವುದರಿಂದ ಕಾಡುಪ್ರಾಣಿಗಳ ಜೀವ ಹಾನಿಗೆ ಕಾರಣವಾಗುವುದನ್ನು ತಪ್ಪಿಸಬಹುದು. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾಯುವ ಪ್ರಕರಣಗಳು ಕಡಿಮೆಯಾಗಿವೆ. ಎಲ್ಲೋ ಒಂದೊಂದು ಕಡೆ ಪ್ರಕರಣ ಮರುಕಳಿಸುತ್ತಿರುವುದನ್ನು ಕಾಣಬಹುದು.

ಮಳೆಯಿಂದ ಅವಘಡಗಳಿಗೆ ಬ್ರೇಕ್: ಬೇಸಿಗೆಯಲ್ಲಿ ಕಾಡಿನ ಹಸಿರು ಒಣಗಿ, ನೀರು ಭತ್ತಿ ಹೋಗುತ್ತದೆ. ಆಹಾರದ ಕೊರತೆ ಉಂಟಾಗುವುದರಿಂದ ವನ್ಯಜೀವಿಗಳು ಕಾಡು ಬಿಟ್ಟು ನಾಡಿಗೆ ಬರುತ್ತವೆ. ಜಮೀನುಗಳಿಗೆ ನುಗ್ಗಿ ಬೆಳೆ ತಿಂದು ಹಾಕುತ್ತವೆ. ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿರುವ ಜಮೀನುಗಳಲ್ಲಿ ಕಾಡುಪ್ರಾಣಿಗಳು ಕರೆಂಟ್ ಶಾಕ್‌ನಿಂದ ಸಾಯುತ್ತವೆ. ಆದರೆ ಈ ಬೇಸಿಗೆಯಲ್ಲೂ ಬೀಳುತ್ತಿರುವ ಮಳೆಯಿಂದ ಅರಣ್ಯಕ್ಕೆ ಜೀವ ಕಳೆ ಬಂದಿದೆ. ಹಸಿರು ಚಿಗುರಿದ್ದು, ಹಳ್ಳ-ಕೊಳ್ಳಗಳಲ್ಲಿ ನೀರು ನಿಂತಿದೆ. ಮುಖ್ಯವಾಗಿ ಕಾಲ್ಗಿಚ್ಚಿನ ಆತಂಕ ದೂರವಾಗಿದೆ. ಬೇಸಿಗೆಯಲ್ಲಿ ಸಂಭವಿಸಬಹುದಾದ ಅನಾಹುತಗಳಿಗೆ ಮಳೆ ತಾತ್ಕಾಲಿಕವಾಗಿ ಕಡಿವಾಣ ಹಾಕಿದೆ.

ಜಮೀನುಗಳ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿ ಕಾಡುಪ್ರಾಣಿಗಳ ಸಾವಿಗೆ ಕಾರಣವಾಗುವುದು ಶಿಕ್ಷಾರ್ಹ ಅಪರಾಧ. ಹೊಲಗಳ ಸುತ್ತ ಸೋಲಾರ್ ತಂತಿ ಬೇಲಿ ಹಾಕಿಸಿಕೊಳ್ಳಲು ಅರಣ್ಯ ಇಲಾಖೆಯಿಂದ 50-50 ದರದಲ್ಲಿ ನೆರವು ನೋಡಲಾಗುತ್ತದೆ. ಈ ಸೌಲಭ್ಯವನ್ನು ರೈತರು ಬಳಕೆ ಮಾಡಿಕೊಳ್ಳಬೇಕು. ಶ್ರೀಪತಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net