ಶನಿವಾರಸಂತೆ: ಸಮಿಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದರೆ, ದುಂಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಫಸಲಿಗೆ ಬಂದ ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ.
ಹಾಸನ ಜಿಲ್ಲೆಯ ಯಸಳೂರು ಮೀಸಲು ಅರಣ್ಯದಿಂದ ಬರುತ್ತಿರುವ ಕಾಡಾನೆಗಳ ಹಿಂಡು ಕೊಡಗು ಜಿಲ್ಲೆಗೆ ಸೇರಿದ ಮಾದರೆ, ದುಂಡಳ್ಳಿ, ಬಿಳಹ ಮುಂತಾದ ಗ್ರಾಮಗಳಲ್ಲಿ ಸಂಚರಿಸಿ ರಾತ್ರಿ ವೇಳೆಯಲ್ಲಿ ಹೊಲ, ಗದ್ದೆ, ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ.
ಸೋಮವಾರ ರಾತ್ರಿ ವೇಳೆ ಮಾದರೆ ಗ್ರಾಮದೊಳಗೆ ನುಸುಳಿದ 3 ಕಾಡಾನೆಗಳು ಗ್ರಾಮದ ರೈತ ಎಂ.ಕೆ.ಮೋಹನ್ ಅವರಿಗೆ ಸೇರಿದ 3 ಎಕರೆ ಭತ್ತದ ಬೆಳೆಯನ್ನು ಧ್ವಂಸಗೊಳಿಸಿವೆ. ರೈತ ಮೋಹನ್ ಶನಿವಾರಸಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪರಿಹಾರ ಕೋರಿ ಮನವಿ ಮಾಡಿದ್ದಾರೆ. ಬುಧವಾರ ಶನಿವಾರಸಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.