

ಬೇಲೂರು: ತಾಲೂಕಿನ ನಿಡುಮನಹಳ್ಳಿ ಹಾಗೂ ಕೋಡಿಹಳ್ಳಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳ ಹಾವಳಿಯಿಂದ ಕಾಫಿ, ಮೆಣಸು, ಏಲಕ್ಕಿ, ಬಾಳೆ ಸೇರಿದಂತೆ ತೆಂಗು ಹಾಗೂ ಜೋಳದ ಬೆಳೆಗಳು ಸೋಮವಾರ ರಾತ್ರಿ ನಾಶವಾಗಿದೆ.
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಎರಡು ದಿನಗಳ ಹಿಂದಷ್ಟೆ ಮತ್ತಾವರ ಹಾಗೂ ಕಬ್ಬಿನಮನೆ ಗ್ರಾಮದಲ್ಲಿ ಸಾಕಷ್ಟು ಬೆಳೆಗಳನ್ನು ನಾಶ ಮಾಡಿವೆ. ಸೋಮವಾರ ರಾತ್ರಿ ನಿಡುಮನಹಳ್ಳಿ ಹಾಗೂ ಕೋಡಿಹಳ್ಳಿ ಗ್ರಾಮದ ಜಮೀನುಗಳಿಗೆ ನುಗ್ಗಿ ಮೂರು ಎಕರೆಗಳಿಗೂ ಹೆಚ್ಚು ಕಾಫಿ, ಮೆಣಸು, ತೆಂಗು, ಜೋಳ, ಬಾಳೆ ಬೆಳೆಯನ್ನು ನಾಶ ಮಾಡಿವೆ. ಇದರಿಂದ ಬೇಸತ್ತ ಗ್ರಾಮಸ್ಥರು ನಮಗೆ ಈ ಆನೆಗಳ ಉಪಟಳದಿಂದ ಶಾಶ್ವತ ಪರಿಹಾರ ದೊರಕಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಇಲ್ಲಿಂದ ನಮ್ಮನ್ನು ಬೇರೆಕಡೆಗೆ ತೆರಳಲು ಅವಕಾಶ ಮಾಡಿಕೊಡಬೇಕೆಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಮೀನಿನ ಮಾಲೀಕರಾದ ಅಂಬಿಕಾ, ಕವಿತಾ, ಹಾಗೂ ರಮೇಶ್ ಮಾತನಾಡಿ, ಕಷ್ಟಪಟ್ಟು ಬೆಳೆದ ಕಾಫಿ ಗಿಡಗಳು ಕಾಡಾನೆಗಳ ಹಾವಳಿಯಿಂದ ಸಂಪೂರ್ಣ ನಾಶವಾಗಿದೆ. ಹಬ್ಬದ ದಿನವಾದ್ದರಿಂದ ಯಾರೂ ತೋಟಕ್ಕೆ ಹೋಗಿರಲಿಲ್ಲ. ಆದರೆ ಮಂಗಳವಾರ ಎಂದಿನಂತೆ ತೋಟದ ಕೆಲಸ ಮಾಡಲು ಬಂದ ಸಂದರ್ಭ ಜಮೀನಿನಲ್ಲಿ ಬೆಳೆದಿದ್ದ 200ಕ್ಕೂ ಹೆಚ್ಚು ಬಾಳೆಗಿಡಗಳನ್ನು ತುಳಿದು ಹಾಕಿವೆ. ಅಲ್ಲದೆ ಅಕ್ಕಪಕ್ಕದ ಕಾಫಿ ತೋಟಗಳಿಗೆ ನುಗ್ಗಿ ಫಸಲಿಗೆ ಬಂದ ಕಾಫಿ ಗಿಡಗಳು, ಮೆಣಸಿನ ಬಳ್ಳಿ, ನೀರು ಹಾಯಿಸಲು ತೋಟದಲ್ಲಿ ಅಳವಡಿಸಿದ ಪೈಪ್‌ಗಳನ್ನೆಲ್ಲ ತುಳಿದು ಹಾಳು ಮಾಡಿವೆ. ಇದರೊಂದಿಗೆ ಪಕ್ಕದ ಜಯಪ್ಪಶೆಟ್ಟಿ, ರಾಮು ಎಂಬುವರ ಒಂದು ಜಮೀನಿನಲ್ಲಿ ಬೆಳೆದಿದ್ದ ಎಕರೆಯಲ್ಲಿ ಜೋಳವನ್ನೆಲ್ಲ ತಿಂದು ನಾಶಪಡಿಸಿದೆ.
ಈ ಆನೆಗಳ ಉಪಟಳದಿಂದ ರೈತರು ಹೇಗೆ ಬದುಕುವುದು ಎಂಬಂತಾಗಿದೆ. ಮತ್ತು ಕಾಡಾನೆಗಳನ್ನು ಓಡಿಸುತ್ತೇವೆ ಎನ್ನುತ್ತಾರೆ. ಆದರೆ ಅವುಗಳು ಇಲ್ಲಿಯೇ ಬೀಡು ಬಿಟ್ಟು ರೈತರ ಬದುಕನ್ನು ಹಾಳು ಮಾಡುತಿದ್ದು, ತಕ್ಷಣವೇ ಸಂಬಂಧಿಸಿದವರು ನಮಗೆ ಶಾಶ್ವತ ಪರಿಹಾರ ನೀಡಿ ಬದುಕಲು ಅವಕಾಶ ಮಾಡಿಕೊಡಬೇಕೆಂಬುದು ರೈತರ ಒತ್ತಾಯವಾಗಿದೆ.
ನಮ್ಮ ಬಿಕ್ಕೋಡು ಸಂಘಟನೆ ಅಧ್ಯಕ್ಷ ಚಂದನ್ ಮಾತನಾಡಿ, ಸಕಲೇಶಪುರ ಭಾಗದಲ್ಲಿ ಮಾತ್ರ ಆನೆಗಳ ಹಾವಳಿ ಇತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾಗದಲ್ಲೂ ಆನೆಗಳ ಹಾವಳಿ ಹೆಚ್ಚಾಗುತ್ತಿದೆ. ಆನೆಗಳ ದಾಳಿಯಿಂದ ಕೂಲಿ ಕಾರ್ಮಿಕರು ಸಾವನ್ನಪ್ಪಿದರೆ, ಮತ್ತೊಂದೆಡೆ ರೈತರು ಬೆಳೆಗಳನ್ನು ಕಳೆದುಕೊಂಡು ಊರು ಬಿಡುವ ಸ್ಥಿತಿ ಉಂಟಾಗಿದೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಷ್ಟ ಹೊಂದಿರುವ ರೈತರಿಗೆ ಪರಿಹಾರ ಕೊಡಿಸಬೇಕು ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಪಾರ್ವತಮ್ಮ, ಶಿವಕುಮಾರ್, ರಮೇಶ್, ಹೇಮರಾಜ್, ವೆಂಕಟಶೆಟ್ಟಿ, ಆನಂದ್, ನಾಗರಾಜ್, ಚಲುವರಾಜುಶೆಟ್ಟಿ ಮತ್ತಿತರರಿದ್ದರು.