ಕಾಡಾನೆಗಳ ಹಾವಳಿ ನಿಯಂತ್ರಿಸಿ

16spt1
Published on

ಸೋಮವಾರಪೇಟೆ: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಐಗೂರು, ಯಡವಾರೆ, ಸಜ್ಜಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದರು.ಯಡವಾರೆ ಗ್ರಾಮದ ಗೌಡ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಎದುರು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಎರಡು ದಿನಗಳ ಬೆಳ್ಳಂ ಬೆಳಗ್ಗೆ ಯಡವಾರೆ-ಕಾಜೂರು ರಸ್ತೆಯಲ್ಲಿ ಕಾಡಾನೆಯೊಂದು ಬೈಕ್ ಸವಾರರ ಮೇಲೆ ದಾಳಿ ನಡೆಸಿದ್ದು, ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಬ್ಯಾರಿಕೇಡ್ ಮತ್ತು ಆನೆ ಕಂದಕ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದ ಸಮಸ್ಯೆ ಜೀವಂತವಾಗಿದೆ ಎಂದು ಸಾರ್ವಜನಿಕರು ದೂರಿದರು.


ಪ್ರತಿ ಬಾರಿ ಕಾಡಾನೆಗಳ ದಾಳಿಯಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡುತ್ತಾರೆ ಹೊರತು ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ. 4 ಕಿಮೀ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಅಸಮರ್ಪಕವಾಗಿದೆ. ಇದೀಗ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟಕ್ಕೆ ಅನುಕೂಲ ಕಲ್ಪಿಸಲು ಮಾತ್ರ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಗ್ರಾಮಸ್ಥರು ದೂರಿದರು.


ಇದರಿಂದಾಗಿ ಕಾಫಿ ತೋಟದೊಳಗೆ ತೆರಳುತ್ತಿದ್ದ ಕಾಡಾನೆಗಳು ರಸ್ತೆಯ ಮೇಲೆಯೇ ಓಡಾಡುತ್ತಿವೆ. ತೋಟದೊಳಗಿರುವ ಆನೆ ಕಾರಿಡಾರ್ ಮುಚ್ಚಿದ್ದಾರೆ. ಇದರಿಂದಾಗಿ ವನ್ಯಪ್ರಾಣಿಗಳು ಜನವಸತಿ ಪ್ರದೇಶದತ್ತ ಬರುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಎಸಿಎಫ್ ಗೋಪಾಲ್ ಮಾತನಾಡಿ, ನಕಾಶೆಯಲ್ಲಿರುವ ಆನೆ ಕಾರಿಡಾರ್ ಮುಚ್ಚಲ್ಪಟ್ಟಿದ್ದರೆ ಅದನ್ನು ತೆರವುಗೊಳಿಸಲಾಗುವುದು. ಉಳಿಕೆಯಾಗಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪುಂಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.


ಆರ್‌ಎಫ್‌ಒ ಚೇತನ್, ಪ್ರಮುಖರಾದ ಮಚ್ಚಂಡ ಅಶೋಕ್, ರಾಯ್ ಪಾಲಾಕ್ಷ, ಗರಗಂದೂರು ಲಕ್ಷ್ಮಣ್, ಅಡಿಕೇರಿ ಸುಬ್ಬಯ್ಯ, ಎಸ್.ಎನ್.ಯೋಗೇಶ್, ಚಿನ್ನಳ್ಳಿ ಹರೀಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net