

ಮೂಡಿಗೆರೆ: ತಾಲೂಕಿನ ಮಾಕೋನಹಳ್ಳಿ, ನಂದಿಪುರ ಭಾಗದಲ್ಲಿ 42 ಕಾಡಾನೆಗಳು ಒಂದು ತಿಂಗಳಿನಿಂದ ರೈತರ ಬೆಳೆಯನ್ನು ಧ್ವಂಸಗೊಳಿಸುತ್ತಿವೆ. ಜನವಸತಿ ಪ್ರದೇಶಕ್ಕೆ ನುಗ್ಗಿ ಭಯ ಉಂಟುಮಾಡುತ್ತಿವೆ. ಮನೆಯ ಗೇಟ್, ಜಾನುವಾರು ಕೊಟ್ಟಿಗೆ ಸೇರಿದಂತೆ ಹಲವು ಕಡೆ ಹಾನಿ ಮಾಡಿವೆ. ಜೀವ ಉಳಿಸಿಕೊಂಡರೆ ಸಾಕೆಂಬ ಸ್ಥಿತಿಯಲ್ಲಿ ಗ್ರಾಮಸ್ಥರಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ ಆತಂಕ ವ್ಯಕ್ತಪಡಿಸಿದರು.
ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಮಾಕೋನಹಳ್ಳಿ ಮತ್ತು ನಂದಿಪುರ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಶನಿವಾರ ಮಾಕೋನಹಳ್ಳಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಯಾವ ಸಮಯದಲ್ಲಾದರೂ ಪ್ರಾಣಹಾನಿ ಸಂಭವವಿದೆ. ಆದರೂ ಕಾಡಾನೆ ಹಾವಳಿ ಸಮಸ್ಯೆ ಪರಿಹಾರಕ್ಕೆ ಶಾಸಕಿ ನಯನಾ ಮೋಟಮ್ಮ ಮತ್ತು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಗಮನಹರಿಸಿಲ್ಲ. ಅರಣ್ಯ ಸಚಿವ ಈಶ್ವರ ಖಂಡ್ರೆ ಚಕಾರವೆತ್ತುತ್ತಿಲ್ಲ. ನಮ್ಮ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ ಎಂದು ದೂರಿದರು.
ಕಾಡುಪ್ರಾಣಿಗಳಿಂದ ಜನರ ಪ್ರಾಣ ಹಾಗೂ ಆಸ್ತಿಪಾಸ್ತಿ ರಕ್ಷಣೆ ಮಾಡದ ಅರಣ್ಯ ಇಲಾಖೆ ಜನರಿಗೆ ಅಗತ್ಯವಿಲ್ಲ. ಎರಡು ದಿನದಲ್ಲಿ ಕಾಡಾನೆಗಳನ್ನು ಅಧಿಕಾರಿಗಳು ಓಡಿಸಬೇಕು. ಇಲ್ಲವಾದರೆ ಮೂಡಿಗೆರೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ನಂತರ ಶಾಸಕರ ಮನೆ ಮುಂದೆ ಅನಿರ್ದಿಷ್ಟಾವಧಿ ಧರಣಿ ಕೂರಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಮುಖಂಡ ಎಸ್.ಪಿ.ರಾಜು ಮಾತನಾಡಿ, ಮಾಕೋನಹಳ್ಳಿ ಮತ್ತು ನಂದಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಭುವನೇಶ್ವರಿ ಹಾಗೂ ಕೆಪಿ ಕಾಲರ್ ತಂಡದ 42 ಕಾಡಾನೆಗಳು 15 ದಿನಗಳಿಂದ ಬೀಡುಬಿಟ್ಟಿವೆ. ಕಾಫಿ ತೋಟವನ್ನು ಸಂಪೂರ್ಣವಾಗಿ ಧ್ವಂಸ ಮಾಡುವ ಜತೆಗೆ ಗ್ರಾಮದ ಮನೆಗಳ ಸಮೀಪ ಬರುತ್ತಿವೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗಲಾರದ ಪರಿಸ್ಥಿತಿ ಉಂಟಾಗಿದೆ. ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳದೆ 15 ದಿನ ಕಳೆದಿದೆ. ಕುಟುಂಬ ನಿರ್ವಹಣೆಗೆ ಕಷ್ಟಪಡಬೇಕಾಗಿದೆ. ರೋಗಿಗಳನ್ನು ರಾತ್ರಿ ವೇಳೆ ಆಸ್ಪತ್ರೆಗೆ ಕರೆದೊಯ್ಯಲು ಆಗುತ್ತಿಲ್ಲ. ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದ್ದರಿಂದ ಎಸಿಎಫ್ ಮೋಹನ್ ಹಾಗೂ ವಲಯ ಅರಣ್ಯಾಧಿಕಾರಿ ಕಾವ್ಯಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಮಾಕೋನಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳಾ, ಸದಸ್ಯ ಪುಟ್ಟರಾಜು, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಬ್ರಿಜೇಶ್, ಗ್ರಾಮಸ್ಥರಾದ ಲಕ್ಷ್ಮಣ ಗೌಡ, ವೀರೇಶ್, ವಿಕ್ರಂ, ಪ್ರಹ್ಲಾದ, ಅನಿಲ್, ಬಿ.ಎ.ಇಂದ್ರೇಶ್, ಸತ್ಯ, ಶಶಿಕಿರಣ್ ಇತರರಿದ್ದರು.