

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಾವಳಿ ನಡೆಸುತ್ತಿರುವ ಕಾಡಾನೆಗಳ ಸ್ಥಳಾಂತರದ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಹಿರೇಗದ್ದೆ ಗ್ರಾಪಂ ತುಪ್ಪೂರು ಬಿರೇಕಲ್ಲು ಭೂತೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ರೈತ ಸಂಘಟನೆ ಹಾಗೂ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಕಾಡಾನೆ ದಾಳಿಯಿಂದ ಅಡಕೆ ತೋಟ, ಭತ್ತದ ಗದ್ದೆಗಳಿಗೆ ಹಾನಿಯಾಗಿದ್ದು, ಇಲಾಖೆಯಿಂದ ಸೂಕ್ತ ಪರಿಹಾರ ನೀಡಲಾಗುವುದು. ತುಪ್ಪೂರು ಭಾಗದಲ್ಲಿ ಮೂರು, ಅಂಡವಾನೆ ಭಾಗದಲ್ಲಿ ಮೂರು, ಗಡಿಗೇಶ್ವರ ಸುತ್ತಮುತ್ತ ಎರಡು ಕಾಡಾನೆಗಳು, ಬಿಕ್ಕರಣೆ, ಸಾರಗೋಡು ಭಾಗದಲ್ಲಿಯೂ ಆನೆಗಳು ಸಂಚರಿಸುತ್ತಿವೆ. ಅರಣ್ಯ ಸಚಿವರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದು, ಶಾಶ್ವತ ಪರಿಹಾರದ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಮಲೆನಾಡು ರೈತ, ನಾಗರಿಕ ಹಿತರಕ್ಷಣಾ ವೇದಿಕೆ ಕ್ಷೇತ್ರಾಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪದಲ್ಲಿ ತುಂಗಾ ತಿರುವು ಕಾಲುವೆ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಎತ್ತಿನಹೊಳೆ ಕಾಲುವೆಗಳಿದ್ದು, ಆನೆಗಳು ಈ ಕಾಲುವೆ ದಾಟಲು ಸಾಧ್ಯವಾಗದೆ ಸುತ್ತಮುತ್ತ ಹಳ್ಳಿಗಳಲ್ಲಿ ತಿರುಗಾಡುತ್ತಿವೆ. ಇದರಿಂದಾಗಿ ಕಾರ್ಮಿಕರು, ಕೃಷಿಕರು ಜಮೀನುಗಳಿಗೆ ಹೋಗದಂತಾಗಿದೆ. ಸರ್ಕಾರ ಕೂಡಲೇ ಆನೆಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಕೃಷಿಕ ಮಂಜುನಾಥ್ ತುಪ್ಪೂರು ಮಾತನಾಡಿ, ಕಾಡಾನೆ ಹಾವಳಿ ಸಮಸ್ಯೆ ಪರಿಹಾರದ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ರೈತರ ಸಭೆ ಕರೆದು ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.
ವಲಯ ಅರಣ್ಯಾಧಿಕಾರಿ ರಂಗನಾಥ್, ಹಿರೇಗದ್ದೆ ಗ್ರಾಪಂ ಸದಸ್ಯ ಬಿ.ಎಂ.ಸುದೇವ್, ಸುರೇಶ್, ಎನ್.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ತುಪ್ಪೂರು ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ರಾಯ ಗೌಡ, ಎನ್.ಆರ್.ಪುರ ಪಿಸಿಎಆರ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಸ್.ಕೌಶಿಕ್ ಪಟೇಲ್ ಇತರರಿದ್ದರು.