

ಬೇಲೂರು: ತಾಲೂಕಿನ ಅರೇಹಳ್ಳಿ ಸಮೀಪದ ವಾಟೇಹಳ್ಳಿ ಐಬಿಸಿ ಕಾಫಿ ತೋಟದ ಲೈನ್‌ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಜಖಂಗೊಳಿಸಿರುವ ಕಾಡಾನೆಗಳ ಹಿಂಡು ಪಕ್ಕದ ತೋಟಕ್ಕೆ ನುಗ್ಗಿ ಬೆಳೆ ನಾಶಪಡಿಸಿವೆ.
ಭಾನುವಾರ ರಾತ್ರಿ ಕೂಲಿ ಕಾರ್ಮಿಕರು ವಾಸಿಸುವ ಲೈನ್ ಮನೆ ಆವರಣಕ್ಕೆ ಬಂದ ಕಾಡಾನೆಗಳ ಹಿಂಡು, ಕಾರ್ಮಿಕ ಜಯಂತ್ ಎಂಬುವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಜಖಂಗೊಳಿಸಿವೆ. ಈ ವೇಳೆ ಬೀದಿ ನಾಯಿಗಳು ಬೊಗಳುವ ಶಬ್ದ ಕೇಳಿ ಜಯಂತ್ ಮನೆ ಬಾಗಿಲು ತೆರೆದು ನೋಡಿದಾಗ ಆನೆಗಳು ಅಲ್ಲಿಯೇ ನಿಂತಿರುವುದನ್ನು ಕಂಡು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಆನೆಗಳು ಪಕ್ಕದ ತೋಟಕ್ಕೆ ನುಗ್ಗಿ ಬೆಳೆಯನ್ನು ನಾಶಪಡಿಸಿದ್ದು, ಘಟನೆಯಿಂದ ಕಾರ್ಮಿಕರು ಭಯಭೀತರಾಗಿದ್ದಾರೆ.